ದೇಶ

Pahalgam terror attack: ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ದಿಕ್ಕೆಟ್ಟ ಮುಸ್ಲಿಂ ಕುಟುಂಬ!

ಸೈಯದ್ ಆದಿಲ್ ಹುಸೇನ್ ಶಾ ಅವರ ತಂದೆ ಸೈಯದ್ ಹೈದರ್ ಶಾ, “ ನಮ್ಮ ಕುಟುಂಬಕ್ಕೆ ಆತನೇ ಸಂಪಾದಿಸುತ್ತಿದ್ದ. ಕೆಲಸಕ್ಕಾಗಿ ನಿನ್ನೆ ಪಹಲ್ಗಾಮ್‌ಗೆ ಹೋಗಿದ್ದ.

Pahalgam terror attack: ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ದಿಕ್ಕೆಟ್ಟ ಮುಸ್ಲಿಂ ಕುಟುಂಬ!
ಸೈಯದ್ ಆದಿಲ್ ಹುಸೇನ್ ಶಾ
Published On :

ಅನಂತ್‌ನಾಗ್: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ನಿನ್ನೆ ಉಗ್ರರು ಗುಂಡಿನ ದಾಳಿ ನಡೆಸುವ ಮುನ್ನಾ ಧರ್ಮ, ಹೆಸರನ್ನು ಕೇಳಿ ಮುಸ್ಲಿಮೇತರರನ್ನು ಹತ್ಯೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಹಿಂದೂಗಳು ಮುಸ್ಲಿಮರನ್ನು ದೂಷಿಸುತ್ತಿದ್ದು, ಆರೋಪ, ಪ್ರತ್ಯಾರೋಪಗಳು ನಡೆಯುತ್ತಿವೆ. ಆದರೆ, ರಕ್ತ ಪಿಪಾಸು ಉಗ್ರರು ಹಿಂದೂಗಳು ಮಾತ್ರವಲ್ಲದೇ ಮುಸ್ಲಿರನ್ನು ಬಲಿತೆಗೆದುಕೊಂಡಿದ್ದಾರೆ. ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಮುಸ್ಲಿಂ ಕುಟಂಬ ದು:ಖದಲ್ಲಿ ಮುಳುಗಿದ್ದು, ಮುಂದೇನೂ ಎಂಬ ಚಿಂತೆಯಲ್ಲಿ ಮುಳುಗಿದೆ. ಅಮಾಯಕನ ಸಾವಿಗೆ ನ್ಯಾಯವನ್ನು ಕೇಳುತ್ತಿದೆ.

ಹೌದು. ಮಂಗಳವಾರ ಉಗ್ರರು ನಡೆಸಿದ ದಾಳಿಯಲ್ಲಿ ತನ್ನ ಕುಟುಂಬಕ್ಕೆ ಆಧಾರವಾಗಿದ್ದ ಕುದುರೆ ಸವಾರ ಸೈಯದ್ ಆದಿಲ್ ಹುಸೇನ್ ಶಾ ಮೃತಪಟ್ಟಿದ್ದಾರೆ. ಇದರಿಂದ ಕಂಗೆಟ್ಟಿರುವ ಕುಟುಂಬ ದಿಕ್ಕೆಟ್ಟು ಹೋಗಿದೆ.

ಎಎನ್‌ಐ ಜೊತೆ ಮಾತನಾಡಿದ ಸೈಯದ್ ಆದಿಲ್ ಹುಸೇನ್ ಶಾ ಅವರ ತಂದೆ ಸೈಯದ್ ಹೈದರ್ ಶಾ, “ ನಮ್ಮ ಕುಟುಂಬಕ್ಕೆ ಆತನೇ ಸಂಪಾದಿಸುತ್ತಿದ್ದ. ಕೆಲಸಕ್ಕಾಗಿ ನಿನ್ನೆ ಪಹಲ್ಗಾಮ್‌ಗೆ ಹೋಗಿದ್ದ. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ದಾಳಿಯ ಬಗ್ಗೆ ಮಾಹಿತಿ ಸಿಕ್ಕಿತ್ತು. ನಾವು ಕರೆ ಮಾಡಿದ್ದಾಗ ಫೋನ್ ಸ್ವಿಚ್ ಆಫ್ ಆಗಿತ್ತು, ನಂತರ ಸಂಜೆ 4:30 ಕ್ಕೆ ಮತ್ತೆ ಮಾಡಿದಾಗ ಫೋನ್ ಸ್ವಿಚ್ ಆನ್ ಆಗಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ನಂತರ ಪೊಲೀಸ್ ಠಾಣೆಗೆ ಹೋದಾಗ ಆತ ದಾಳಿಯಿಂದ ಮೃತಪಟ್ಟಿದ್ದ. ನಮ್ಮ ಕುಟುಂಬಕ್ಕೆ ಇದದ್ದು ಆತನೊಬ್ಬನೇ. ಆತನ ಸಾವಿಗೆ ನ್ಯಾಯ ಸಿಗಬೇಕು. ತಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಮಗನನ್ನು ಕಳೆದುಕೊಂಡ ನೋವಿನಲ್ಲಿ ಗದ್ಗದಿತರಾಗಿ ಮಾತನಾಡಿದ ಶಾ ಅವರ ತಾಯಿ, ಕುದುರೆ ಓಡಿಸಿ ಕುಟುಂಬ ಸಾಕುತ್ತಿದ್ದ, ಈಗ ನಮ್ಮನ್ನು ಪೋಷಿಸಲು ಬೇರೆ ಯಾರೂ ಇಲ್ಲ, ಅವನಿಲ್ಲದೆ ಏನು ಮಾಡೋದು ಎಂಬುದೇ ತಿಳಿಯುತ್ತಿಲ್ಲ ಎಂದು ಕಣ್ಣೀರಿಟ್ಟರು. ಶಾ ಅವರ ಚಿಕ್ಕಪ್ಪ, ಶಾಹೀದ್ ಬಗ್ ಸಿಂಗ್ ಮಾತನಾಡಿ, ಆದಿಲ್ ಕುಟುಂಬದಲ್ಲಿ ಹಿರಿಯ ಮಗನಾಗಿದ್ದ. ಮಕ್ಕಳು, ಹೆಂಡತಿ ಸೇರಿದಂತೆ ಈ ಕುಟುಂಬಕ್ಕೆ ಬೆನ್ನೆಲುಬಾಗಿದ್ದರು. ಈಗ ಅವರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅವರು ಬಡವರಾಗಿದ್ದು, ಆದಿಲ್ ಕುಟುಂಬಕ್ಕೆ ಈಗ ರಕ್ಷಣೆ ಮತ್ತು ಬೆಂಬಲ ಬೇಕಾಗಿದೆ. ಸರ್ಕಾರ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಇದು ನಮ್ಮ ಕಾಶ್ಮೀರಕ್ಕೆ ಕಳಂಕವಾಗಿದೆ. ಈ ದಾಳಿಯ ಬಗ್ಗೆ ತನಿಖೆ ನಡೆಸಿ, ಮುಂದೆ ಅದಿಲ್ ನಂತಹ ಅಮಾಯಕರ ಸಾವು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರ ಸಂಬಂಧಿ ಗುಲಾಮ್ ಹೇಳಿದರು. ಶಾ ಕುಟುಂಬವು ತಮ್ಮ ಮಗನ ಸಾವಿಗೆ ಮಾತ್ರವಲ್ಲ, ತಮ್ಮ ಪ್ರದೇಶವನ್ನು ಪೀಡಿಸುವ ಕ್ರೂರ ಭಯೋತ್ಪಾದನೆಯಿಂದ ನೊಂದ ಎಲ್ಲಾ ಕುಟುಂಬಕ್ಕೂ ನ್ಯಾಯ ಸಿಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.