'ಅವರು ವಿದೇಶದಲ್ಲಿದ್ದಾಗಲೆಲ್ಲಾ...': ಚುನಾವಣಾ ಆಯೋಗದ ರಾಜಿ ಸ್ಪಷ್ಟ ಎಂದ ರಾಹುಲ್ ವಿರುದ್ಧ ಬಿಜೆಪಿ ಕಿಡಿ
ಕೇಂದ್ರ ಚುನಾವಣಾ ಆಯೋಗು "ರಾಜಿ ಮಾಡಿಕೊಂಡಿರುವುದರಿಂದ" ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಗೆಲ್ಲಲು ಸಾಧ್ಯವಾಯಿತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಗೆಲುವನ್ನು ಪ್ರಶ್ನಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಭಾರತೀಯ ಜನತಾ ಪಕ್ಷ(ಬಿಜೆಪಿ), ಅವರು ವಿದೇಶದಲ್ಲಿದ್ದಾಗಲೆಲ್ಲಾ ಹೀಗೆ ಎಂದು ತಿರುಗೇಟು ನೀಡಿದೆ.
ಕೇಂದ್ರ ಚುನಾವಣಾ ಆಯೋಗು "ರಾಜಿ ಮಾಡಿಕೊಂಡಿರುವುದರಿಂದ" ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಗೆಲ್ಲಲು ಸಾಧ್ಯವಾಯಿತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಭಾನುವಾರ ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ, ಚುನಾವಣಾ ಆಯೋಗ "ರಾಜಿ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ" ಮತ್ತು "ವ್ಯವಸ್ಥೆಯಲ್ಲಿ ಲೋಪಗಳಾಗಿವೆ" ಎಂದು ಆರೋಪಿಸಿದ್ದರು.
ಸರಳವಾಗಿ ಹೇಳುವುದಾದರೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ವಯಸ್ಕರಿಗಿಂತ ಹೆಚ್ಚಿನ ಜನರು ಮತ ಚಲಾಯಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
"ಚುನಾವಣಾ ಆಯೋಗವು ಸಂಜೆ 5:30 ಕ್ಕೆ ನಮಗೆ ಮತದಾನದ ಅಂಕಿ ಅಂಶವನ್ನು ನೀಡಿತು ಮತ್ತು ಸಂಜೆ 5:30 ರಿಂದ 7:30 ರ ನಡುವೆ, 65 ಲಕ್ಷ ಮತದಾರರು ಮತ ಚಲಾಯಿಸಿದರು. ಇದು ಭೌತಿಕವಾಗಿ ಅಸಾಧ್ಯ. ಒಬ್ಬ ಮತದಾರ ಮತ ಚಲಾಯಿಸಲು ಸುಮಾರು 3 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದನ್ನು ಆಧರಿಸಿ ನೀವು ಲೆಕ್ಕ ಹಾಕಿದರೆ, ಮತದಾನದ ಪ್ರಕ್ರಿಯೆ ಮರು ದಿನ ಬೆಳಗಿನ ಜಾವ 2 ಗಂಟೆಯವರೆಗೆ ಮತದಾನ ನಡೆಯಬೇಕಿತ್ತು" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ನಾವು ಈ ಕುರಿತು ವಿಡಿಯೋಗ್ರಫಿ ಕೇಳಿದಾಗ, ಅವರು ಅದನ್ನು ನಿರಾಕರಿಸಿದ್ದಲ್ಲದೆ, ಈಗ ನಮಗೆ ವಿಡಿಯೋಗ್ರಫಿ ಕೇಳಲು ಅವಕಾಶವಿಲ್ಲದ ರೀತಿಯಲ್ಲಿ ಕಾನೂನನ್ನು ಬದಲಾಯಿಸಿದರು" ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
"ಚುನಾವಣಾ ಆಯೋಗವು ರಾಜಿ ಮಾಡಿಕೊಂಡಿದೆ ಎಂಬುದು ನಮಗೆ ಸ್ಪಷ್ಟವಾಗಿದೆ ಮತ್ತು ವ್ಯವಸ್ಥೆಯಲ್ಲಿ ಏನೋ ತಪ್ಪಿದೆ ಎಂಬುದು ಸ್ಪಷ್ಟವಾಗುತ್ತಿದೆ. ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ" ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.
ರಾಹುಲ್ ಗಾಂಧಿ "ದೇಶದ್ರೋಹಿ"
ರಾಹುಲ್ ಗಾಂಧಿ ಹೇಳಿಕೆಗೆ ಕೆರಳಿ ಕೆಂಡವಾದ ಆಡಳಿತಾರೂಢ ಬಿಜೆಪಿ, ಅವರು ಒಬ್ಬ "ದೇಶದ್ರೋಹಿ" ಎಂದು ಜರಿದಿದೆ. ಅಲ್ಲದೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಕ್ರಮದಿಂದ ಹತಾಶೆಗೊಂಡಿರುವ ರಾಹುಲ್ ಗಾಂಧಿ ಚುನಾವಣಾ ಆಯೋಗದ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ತಿರುಗೇಟು ನೀಡಿದ್ದಾರೆ.
"ನೀವು ನ್ಯಾಷನಲ್ ಹೆರಾಲ್ಡ್ ಪ್ರಕರಣದಿಂದ ಜಾರಿ ನಿರ್ದೇಶನಾಲಯದ ಮೇಲಿನ ಕೋಪವನ್ನು ಚುನಾವಣಾ ಆಯೋಗದ ಮೇಲೆ ಹಾಕುತ್ತಿದ್ದೀರಿ. ಹಾಗೆ ಮಾಡುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ" ಎಂದು ಪಾತ್ರ ಹೇಳಿದ್ದಾರೆ.
"ಇಡಿ ನಿಮ್ಮನ್ನು ಬಿಡುವುದಿಲ್ಲ ಏಕೆಂದರೆ ಅದು ಸತ್ಯಗಳ ಆಧಾರದ ಮೇಲೆ ಕೆಲಸ ಮಾಡುತ್ತದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಿಮ್ಮನ್ನು ಮತ್ತು ನಿಮ್ಮ ತಾಯಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತದೆ" ಎಂದು ಪಾತ್ರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇನ್ನು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಕಾಂಗ್ರೆಸ್ ನಾಯಕರು "ವಿದೇಶದಲ್ಲಿದ್ದಾಗಲೆಲ್ಲಾ ಭಾರತ ಮತ್ತು ಅದರ ಪ್ರಜಾಪ್ರಭುತ್ವ ವ್ಯವಸ್ಥೆಗಳ ಬಗ್ಗೆ ದ್ವೇಷಪೂರಿತ ಆಲೋಚನೆ ಹಂಚಿಕೊಳ್ಳುವುದನ್ನು ಮುಂದುವರೆಸಿದ್ದಾರೆ" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆ ಸಮರ್ಥಿಸಿಕೊಂಡ ಕಾಂಗ್ರೆಸ್
ಏತನ್ಮಧ್ಯೆ, ಕಾಂಗ್ರೆಸ್ ತನ್ನ ಮಾಜಿ ಅಧ್ಯಕ್ಷರ ಹೇಳಿಕೆ ಸಮರ್ಥಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ವಿಶ್ವದ ಯಾವ ಭಾಗದಿಂದ ಅವರು ಮಾತನಾಡುತ್ತಾರೆ ಎಂಬುದು ಮುಖ್ಯವಲ್ಲ ಎಂದು ಪ್ರತಿಪಾದಿಸಿದೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ವಿರೋಧ ಪಕ್ಷವು ಇಸಿಐ ಕಾರ್ಯನಿರ್ವಹಣೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ ಮತ್ತು ಚುನಾವಣಾ ಆಯೋಗವು ಅವುಗಳಿಗೆ ಉತ್ತರಿಸಬೇಕು ಎಂದು ಹೇಳಿದರು.
"ಇಸಿಐ ಬಗ್ಗೆ ನಮಗೆ ಅನುಮಾನಗಳಿವೆ. ಮತದಾನದ ಕೊನೆಯ ಗಂಟೆಯಲ್ಲಿ ಮತದಾನದಲ್ಲಿ 10 ರಿಂದ 13 ಪ್ರತಿಶತದಷ್ಟು ಏರಿಕೆಯಾಗುವುದು ಭೌತಿಕವಾಗಿ ಸಾಧ್ಯವಿಲ್ಲ" ಎಂದು ಅವರು ವಾದಿಸಿದರು.
"ಇಸಿಐ ಉತ್ತರ ನೀಡಲಿ(ಕಾಂಗ್ರೆಸ್ ಎತ್ತಿರುವ ವಿಷಯಗಳಿಗೆ)... ಬಿಜೆಪಿ ಏಕೆ ಪ್ರತಿಕ್ರಿಯಿಸುತ್ತಿದೆ? ವಿದೇಶಿ ನೆಲದಲ್ಲಿ ದೇಶೀಯ ರಾಜಕೀಯ ವಿಷಯಗಳ ಬಗ್ಗೆ ಮೊದಲು ಮಾತನಾಡಿದ್ದೇ ಪ್ರಧಾನಿ ನರೇಂದ್ರ ಮೋದಿ. ಅವರಿಂದಲೇ ನಾವು ಕಲಿತಿದ್ದೇವೆ" ಎಂದು ತಿರುಗೇಟು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.





