ದೇಶ

ನಿಶಿಕಾಂತ್ ದುಬೆ ಹೇಳಿಕೆ: ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ನಮ್ಮ ಒಪ್ಪಿಗೆ ಅಗತ್ಯವಿಲ್ಲ- ಅರ್ಜಿದಾರರಿಗೆ Supreme Court

ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರನ್ನು ಟೀಕಿಸಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.

ನಿಶಿಕಾಂತ್ ದುಬೆ ಹೇಳಿಕೆ: ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ನಮ್ಮ ಒಪ್ಪಿಗೆ ಅಗತ್ಯವಿಲ್ಲ- ಅರ್ಜಿದಾರರಿಗೆ Supreme Court
ಸುಪ್ರೀಂ ಕೋರ್ಟ್
Published On :

ನವದೆಹಲಿ: ವಕ್ಫ್ ಮಸೂದೆ ಕುರಿತಂತೆ ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸಂಜೀವ್ ಖನ್ನಾ ಅವರನ್ನು ಟೀಕಿಸಿದ್ದಕ್ಕಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ತೂಗುಗತ್ತಿ ತೂಗುತ್ತಿದೆ.

ಹೌದು.. ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರನ್ನು ಟೀಕಿಸಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದ್ದು, 'ಅರ್ಜಿ ಸಲ್ಲಿಸಲು ತನ್ನ ಅನುಮತಿ ಅಗತ್ಯವಿಲ್ಲ' ಎಂದು ಸುಪ್ರೀಂ ಕೋರ್ಟ್ ಸೋಮವಾರ ಅರ್ಜಿದಾರರಿಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠದ ಮುಂದೆ ಈ ವಿಷಯ ವಿಚಾರಣೆಗೆ ಬಂದಿತ್ತು. ದುಬೆಯವರ ಹೇಳಿಕೆಗಳ ಕುರಿತ ಇತ್ತೀಚಿನ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಅರ್ಜಿದಾರರ ಪರ ವಕೀಲರು, ನ್ಯಾಯಾಲಯದ ಅನುಮತಿಯೊಂದಿಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಬಯಸುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗವಾಯಿ, “ನೀವು ಅರ್ಜಿ ಸಲ್ಲಿಸಿ, ಅದಕ್ಕೆ ನಮ್ಮ ಅನುಮತಿ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿದ ಅರ್ಜಿದಾರರು, ಈ ವಿಷಯದಲ್ಲಿ ಅಟಾರ್ನಿ ಜನರಲ್ ಅವರಿಂದ ಅನುಮತಿ ಪಡೆಯಬೇಕಾಗಿದೆ ಎಂದು ಪೀಠಕ್ಕೆ ತಿಳಿಸಿದ್ದಾರೆ.

ವಕ್ಫ್ ಕಾಯ್ದೆಯ ತಿದ್ದುಪಡಿಗಳನ್ನು ಪ್ರಶ್ನಿಸಿದ ದಾವೆದಾರರಲ್ಲಿ ಒಬ್ಬರ ಪರ ವಕೀಲರಾಗಿರುವ ಸುಪ್ರೀಂ ಕೋರ್ಟ್ ವಕೀಲ ಅನಸ್ ತನ್ವೀರ್, ಅಟಾರ್ನಿ ಜನರಲ್ ಆರ್ ವೆಂಕಟ್ರಮಣಿ ಅವರಿಗೆ ಪತ್ರ ಬರೆದು, ಸುಪ್ರೀಂ ಕೋರ್ಟ್‌ನ ಘನತೆಯನ್ನು ಕುಗ್ಗಿಸುವ ಗುರಿಯನ್ನು ಹೊಂದಿರುವ ಹೇಳಿಕೆಗಳಿಗಾಗಿ ಸಂಸದ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒಪ್ಪಿಗೆ ಕೋರಿದ್ದರು.

“1975ರ ಸುಪ್ರೀಂ ಕೋರ್ಟ್ ನಿಂದನೆ ಪ್ರಕ್ರಿಯೆಗಳನ್ನು ನಿಯಂತ್ರಿಸುವ ನಿಯಮಗಳ ನಿಬಂದನೆ 3 (ಸಿ) ಯೊಂದಿಗೆ ಓದಲಾದ ನ್ಯಾಯಾಂಗ ನಿಂದನೆ ಕಾಯ್ದೆ, 1971 ರ ಸೆಕ್ಷನ್ 15 (1) (ಬಿ) ಅಡಿಯಲ್ಲಿ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ, ಜಾರ್ಖಂಡ್‌ನ ಗೊಡ್ಡಾ ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಸಾರ್ವಜನಿಕವಾಗಿ ನೀಡಿದ ಹೇಳಿಕೆಗಳು ದಾರಿತಪ್ಪಿಸುವ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಘನತೆ ಮತ್ತು ಅಧಿಕಾರವನ್ನು ಕುಗ್ಗಿಸುವ ಗುರಿಯನ್ನು ಹೊಂದಿರುವ ಹೇಳಿಕೆಗಳಾಗಿವೆ. ಹಾಗಾಗಿ, ಅವರ ವಿರುದ್ದ ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಪ್ರಾರಂಭಿಸಲು ನಿಮ್ಮ ಒಪ್ಪಿಗೆ ಕೋರುತ್ತೇನೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅಂದಹಾಗೆ ಈ ತಿಂಗಳ ಆರಂಭದಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕರಿಸಲ್ಪಟ್ಟ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಕಳೆದ ಬುಧವಾರ ವಿಚಾರಣೆ ನಡೆಸಿದೆ. ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡುವುದು ಮತ್ತು ಬಳಕೆದಾರರಿಂದ ವಕ್ಫ್ ಆಸ್ತಿಗಳನ್ನು ತೆಗೆದು ಹಾಕಲು ಅವಕಾಶ ನೀಡುವಂತಹ ಕೆಲವು ನಿಬಂಧನೆಗಳು ಮೂಲಭೂತ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಅರ್ಜಿದಾರರು ವಾದಿಸುತ್ತಿದ್ದಾರೆ. ಇದರಲ್ಲಿ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸುವುದನ್ನು ದುಬೆಯವರು ಪ್ರಶ್ನಿಸಿದ್ದರು.

ಏನು ಹೇಳಿದ್ದರು ಬಿಜೆಪಿ ಸಂಸದ?

ವಕ್ಫ್ ಮಸೂದೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿಗಳ ವಿಚಾರಣೆ ವೇಳೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ ಯಥಾಸ್ಥಿತಿ ಮುಂದುವರೆಸುವಂತೆ ಸೂಚಿಸಿತ್ತು. ಸುಪ್ರೀಂ ಕೋರ್ಟ್ ನ ಈ ನಡೆ ಆಡಳಿತಾರೂಢ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಸಂಸದ ನಿಶಿಕಾಂತ್ ದುಬೆ, 'ಸುಪ್ರೀಂ ಕೋರ್ಟ್ ಕಾನೂನುಗಳನ್ನು ರೂಪಿಸುವುದಾದರೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳನ್ನು ಮುಚ್ಚಿ ಎಂದು ವಾಗ್ದಾಳಿ ನಡೆಸಿದ್ದರು. ಅಲ್ಲದೆ ದೇಶದಲ್ಲಿ “ಅಂತರ್ಯುದ್ಧ ಉಂಟಾದರೆ” ಸಿಜೆಐ ಖನ್ನಾ ಅವರೇ ಅದಕ್ಕೆ ಕಾರಣ ಎಂದು ಟೀಕಿಸಿದ್ದರು.

ಅಂತರ ಕಾಯ್ದುಕೊಂಡ ಬಿಜೆಪಿ

ಸುಪ್ರೀಂ ಕೋರ್ಟ್‌ ವಿರುದ್ದದ ದುಬೆ ಅವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದ್ದು, ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಈ ಹೇಳಿಕೆಗಳನ್ನು ಅವರ ವೈಯಕ್ತಿಕ ಅಭಿಪ್ರಾಯಗಳು ಎಂದಿದ್ದಾರೆ. ನ್ಯಾಯಾಂಗವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ. ಅಂತಹ ಹೇಳಿಕೆಗಳನ್ನು ನೀಡದಂತೆ ಪಕ್ಷದ ನಾಯಕರಿಗೆ ನಿರ್ದೇಶನ ನೀಡಿದ್ದೇನೆ ಎಂದು ನಡ್ಡಾ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.