ನಕಲಿ ಕಲಬೆರಕೆ ಪನ್ನೀರ್: ಕ್ರಮಕ್ಕೆ ಒತ್ತಾಯಿಸಿ ಕೇಂದ್ರ ಆರೋಗ್ಯ ಸಚಿವರಿಗೆ ಪ್ರಲ್ಹಾದ್ ಜೋಶಿ ಪತ್ರ
ದೇಶಾದ್ಯಂತ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟ ಮತ್ತು ಬಳಕೆ ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ(NCH) ವ್ಯಾಪಕ ದೂರುಗಳು ಬರುತ್ತಿವೆ

ನವದೆಹಲಿ: ದೇಶಾದ್ಯಂತ ಮಾರುಕಟ್ಟೆಯಲ್ಲಿ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟವಾಗುತ್ತಿರುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಬೆಳಕು ಚೆಲ್ಲಿದ್ದಾರೆ.
ದೇಶಾದ್ಯಂತ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟ ಮತ್ತು ಬಳಕೆ ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ(NCH) ವ್ಯಾಪಕ ದೂರುಗಳು ಬರುತ್ತಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ದೇಶದ ಮಾರುಕಟ್ಟೆಗಳಲ್ಲಿ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟದ ಬಗ್ಗೆ ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಅನೇಕ ದೂರುಗಳನ್ನು ಸ್ವೀಕರಿಸಿದೆ. ಹೀಗಾಗಿ ಇದರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಿ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಆರೋಗ್ಯ ಸಚಿವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ದೇಶಾದ್ಯಂತ ಫಾಸ್ಟ್ ಫುಡ್ ಕೇಂದ್ರಗಳು, ರೆಸ್ಟೋರೆಂಟ್ಗಳು ಮತ್ತಿತರೆಡೆ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟ ಮಾಡಲಾಗುತ್ತಿದೆ. ವಿಶೇಷವಾಗಿ ಪನೀರ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥವಾಗಿದ್ದರಿಂದ ಇದನ್ನು ಗಮನಿಸಿರುವ ಸಾರ್ವಜನಿಕರು ಗ್ರಾಹಕ ಸಹಾಯವಾಣಿ ಮೂಲಕ ವ್ಯಾಪಕವಾಗಿ ದೂರು ಸಲ್ಲಿಸಿದ್ದಾರೆ. ಕಲಬೆರಕೆ ಪನೀರ್ ಸೇವನೆಯಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಗ್ರಾಹಕರು ನೀಡಿದ ದೂರಿನಲ್ಲಿ ತೀವ್ರ ಕಳವಳ ಸಹ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಆಹಾರ ಗುಣಮಟ್ಟ ಮತ್ತು ಸುರಕ್ಷತೆಗಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ದುಗುಡವನ್ನು ತಮ್ಮ ಗಮನಕ್ಕೆ ತರಬಯಸಿದ್ದೇನೆ ಎಂದು ಸಚಿವ ಜೋಶಿ ಅವರು ಕೇಂದ್ರ ಆರೋಗ್ಯ ಸಚಿವರ ಗಮನ ಸೆಳೆದಿದ್ದಾರೆ.
ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಪೋರ್ಟಲ್ನಲ್ಲಿ ಹಲವಾರು ದೂರುಗಳನ್ನು ದಾಖಲಿಸಿದ್ದಾರೆ. ಇದು ದೇಶಾದ್ಯಂತ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟ ಮತ್ತು ಬಳಕೆ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಅಂತಹ ನಕಲಿ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಸೇವನೆಯು ಜನರ ತೀವ್ರ ಮತ್ತು ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಹಾಗಾಗಿ ಇದರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.
ಪನೀರ್ ಉತ್ಪಾದನಾ ಸಂಸ್ಥೆಗಳು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006ರ ಪ್ರಕಾರ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವರಲ್ಲಿ ಮನವಿ ಮಾಡಿದ್ದಾರೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



