ದೇಶ

ರೈಲ್ವೆ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಅವಧಿ 120 ರಿಂದ 60 ದಿನಗಳಿಗೆ ಇಳಿಕೆ

ಪ್ರಯಾಣಿಕರು ಇನ್ನು ಮುಂದೆ ಮುಂಗಡ ಕಾಯ್ದಿರಿಸುವಿಕೆಯ ಅವಧಿಯ(ARP) ಅಡಿಯಲ್ಲಿ ಟಿಕೆಟ್‌ಗಳನ್ನು ನಾಲ್ಕು ತಿಂಗಳ ಮುಂಚಿತವಾಗಿ ಬುಕ್ ಮಾಡಲು ಸಾಧ್ಯವಾಗುವುದಿಲ್ಲ.

ರೈಲ್ವೆ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಅವಧಿ 120 ರಿಂದ 60 ದಿನಗಳಿಗೆ ಇಳಿಕೆ
ಸಂಗ್ರಹ ಚಿತ್ರ
Published On :

ನವದೆಹಲಿ: ಹಬ್ಬದ ಸೀಸನ್‌ಗೆ ಮುಂಚಿತವಾಗಿ, ರೈಲ್ವೆ ಸಚಿವಾಲಯವು ಗುರುವಾರ ಸುತ್ತೋಲೆ ಹೊರಡಿಸಿದ್ದು, ನವೆಂಬರ್ 1 ರಿಂದ ಜಾರಿಗೆ ಬರುವಂತೆ, ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಅವಧಿಯನ್ನು ಅಸ್ತಿತ್ವದಲ್ಲಿರುವ 120 ದಿನಗಳಿಂದ 60 ದಿನಗಳಿಗೆ(ಪ್ರಯಾಣದ ದಿನಾಂಕವನ್ನು ಹೊರತುಪಡಿಸಿ) ಇಳಿಸಲಾಗುವುದು ಎಂದು ಹೇಳಿದೆ.

ಪ್ರಯಾಣಿಕರು ಇನ್ನು ಮುಂದೆ ಮುಂಗಡ ಕಾಯ್ದಿರಿಸುವಿಕೆಯ ಅವಧಿಯ(ARP) ಅಡಿಯಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಲು ನಿರ್ಧರಿಸಿದ ಪ್ರಯಾಣದ ದಿನಾಂಕಕ್ಕಿಂತ ನಾಲ್ಕು ತಿಂಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ.

ಈ ಮುಂಚೆ 120 ದಿನ ಅಂದರೆ 4 ತಿಂಗಳ ಮೊದಲೇ ಟಿಕೆಟ್​​ ಬುಕ್​ ಮಾಡಿಕೊಳ್ಳುವ ಅವಕಾಶವಿತ್ತು. ಅದನ್ನು ಈಗ ಇಲಾಖೆ ಕಡಿತ ಮಾಡಿ ಆದೇಶ ಹೊರಡಿಸಿದೆ.

ಈ ಸಂಬಂಧ ಎಲ್ಲಾ ವಲಯಗಳ ಎಲ್ಲಾ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ ರೈಲ್ವೆ ಸಚಿವಾಲಯವು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ನವೆಂಬರ್ 1 ರಿಂದ ಈ ಆದೇಶ ಜಾರಿಗೊಳಿಸುವಂತೆ ಸೂಚಿಸಲಾಗಿದೆ.

ಆದಾಗ್ಯೂ 120 ದಿನಗಳ ಮುಂಗಡ ಕಾಯ್ದಿರಿಸುವಿಕೆ ಅವಧಿ(ಎಆರ್​ಪಿ)ಯನ್ನು ಇಳಿಕೆ ಮಾಡಿದ್ದರೂ, ಅಕ್ಟೋಬರ್ 31 ರವರೆಗೆ ಮಾಡಿದ ಎಲ್ಲಾ ಬುಕಿಂಗ್‌ಗಳು ಮಾನ್ಯವಾಗಿರುತ್ತವೆ. ನಿಗದಿತ ದಿನಾಂಕದ ನಂತರ ಎಲ್ಲ ಟಿಕೆಟ್​ಗಳನ್ನು ರದ್ದು ಮಾಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.

“ತಾಜ್ ಎಕ್ಸ್‌ಪ್ರೆಸ್, ಗೋಮತಿ ಎಕ್ಸ್‌ಪ್ರೆಸ್‌ನಂತಹ ಹಗಲಿನಲ್ಲಿ ಸಂಚರಿಸುವ ನಿರ್ದಿಷ್ಟ ಎಕ್ಸ್‌ಪ್ರೆಸ್ ರೈಲುಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಕಾರಣ, ಈ ರೈಲುಗಳಲ್ಲಿ ಮುಂಗಡ ಕಾಯ್ದಿರಿಸುವಿಕೆ ಕಡಿಮೆ ಸಮಯದ ಮಿತಿ ಈಗಾಗಲೇ ಜಾರಿಯಲ್ಲಿದೆ ಎಂದು ಮಂಡಳಿ ತಿಳಿಸಿದೆ.

ಇನ್ನು, ವಿದೇಶಿ ಪ್ರವಾಸಿಗರಾಗಿದ್ದಲ್ಲಿ ಅವರಿಗೆ ಈಗಿರುವ 365 ದಿನಗಳ ಕಾಲಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿದೇಶಿಗರು ವರ್ಷದಲ್ಲಿ ಯಾವುದೇ ದಿನಕ್ಕಾದರೂ ರೈಲ್ವೆ ಟಿಕೆಟ್​ ಮುಂಗಡ ಬುಕಿಂಗ್​ ಮಾಡಿಕೊಳ್ಳಬಹುದಾಗಿದೆ ಎಂದು ರೈಲ್ವೆ ಸಚಿವಾಲಯ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.