ದೇಶ

ಗುಜರಾತ್‌ನಲ್ಲಿ 5000 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ: ಮೂವರು ಫಾರ್ಮಾ ಕಂಪನಿಗಳ ನಿರ್ದೇಶಕರು ಸೇರಿ ಐವರ ಬಂಧನ!

ಇಲ್ಲಿಯವರೆಗೆ 1,289 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಥಾಯ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 13,000 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಗುಜರಾತ್‌ನಲ್ಲಿ 5000 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ: ಮೂವರು ಫಾರ್ಮಾ ಕಂಪನಿಗಳ ನಿರ್ದೇಶಕರು ಸೇರಿ ಐವರ ಬಂಧನ!
ಸಂಗ್ರಹ ಚಿತ್ರ — TNIE
Published On :

ಗಾಂಧಿನಗರ(ಗುಜರಾತ್): ದೆಹಲಿ ಮತ್ತು ಗುಜರಾತ್ ಪೊಲೀಸರು ಭಾನುವಾರ ಗುಜರಾತ್‌ನ ಅಂಕಲೇಶ್ವರದಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ 5000 ಕೋಟಿ ರೂಪಾಯಿ ಮೌಲ್ಯದ ಸುಮಾರು 518 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಮೂವರು ಫಾರ್ಮಾ ಕಂಪನಿಗಳ ನಿರ್ದೇಶಕರು ಸೇರಿ ಐವರನ್ನು ಬಂಧಿಸಲಾಗಿದೆ.

ಅವಕಾರ್ ಡ್ರಗ್ಸ್ ಕಂಪನಿಯ ನಿರ್ದೇಶಕರಾದ ಅಶ್ವಿನ್ ರಮಣಿ, ಬ್ರಿಜೇಶ್ ಕೊಥಿಯಾ ಮತ್ತು ವಿಜಯ್ ಭೇಸಾನಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ

ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ 700 ಕೆಜಿ ಕೊಕೇನ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಹೊಸ ಬೆಳವಣಿಗೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 1,289 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಥಾಯ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 13,000 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ.

ಇದು ದೇಶದ ಯಾವುದೇ ಏಜೆನ್ಸಿ ಮಾಡಿದ ಅತಿ ದೊಡ್ಡ ದಾಳಿ ಎಂದು ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, 700 ಕೆಜಿ ಕೊಕೇನ್ ವಶಪಡಿಸಿಕೊಂಡ ಪ್ರಕರಣದ ತನಿಖೆಯ ವೇಳೆ, ಅಂಕಲೇಶ್ವರ ಮೂಲದ ಅವ್ಕಾರ್ ಡ್ರಗ್ಸ್ ಲಿಮಿಟೆಡ್ ಕಂಪನಿಯಿಂದ ಡ್ರಗ್ಸ್ ತಂದಿರುವುದು ಪತ್ತೆಯಾಗಿತ್ತು. ಈ ಮಾಹಿತಿ ಆಧರಿಸಿ ವಿಶೇಷ ತಂಡವನ್ನು ಗುಜರಾತ್‌ಗೆ ಕಳುಹಿಸಲಾಗಿತ್ತು. ಅಲ್ಲಿ ಕಂಪನಿಯ ಗೋದಾಮಿನಿಂದ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ ಐವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ದುಬೈ ಮತ್ತು ಬ್ರಿಟನ್‌ನಿಂದ ಕಾರ್ಯಾಚರಣೆ ನಡೆಸುತ್ತಿರುವ ಅಂತಾರಾಷ್ಟ್ರೀಯ ಗ್ಯಾಂಗ್‌ಗೆ ಸಂಬಂಧಿಸಿದಂತೆ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 2ರಂದು, ವಿಶೇಷ ಸೆಲ್ ದಕ್ಷಿಣ ದೆಹಲಿಯ ಮಹಿಪಾಲ್‌ಪುರದ ಗೋದಾಮಿನಿಂದ 5,620 ಕೋಟಿ ರೂಪಾಯಿ ಮೌಲ್ಯದ 560 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಥಾಯ್ ಗಾಂಜಾವನ್ನು ವಶಪಡಿಸಿಕೊಂಡಿತ್ತು. ಅಂದು ನಾಲ್ಕು ಜನರನ್ನು ಬಂಧಿಸಿತ್ತು. ಇದರ ನಂತರ, ಅಮೃತಸರ ಮತ್ತು ಚೆನ್ನೈನಿಂದ ಇತರ ಇಬ್ಬರನ್ನು ಬಂಧಿಸಲಾಯಿತು. ಈ ಪ್ರಕರಣದಲ್ಲಿ ಬಂಧಿತ ಏಳನೇ ವ್ಯಕ್ತಿಯಾಗಿರುವ ಉತ್ತರ ಪ್ರದೇಶದ ಹಾಪುರದ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.