ಸಾಲ ಮರುಪಾವತಿ ಮಾಡದ ಮಹಿಳೆಯ ಮಗನನ್ನು ಅಡ ಇಟ್ಟುಕೊಂಡ ಹಣಕಾಸು ಸಂಸ್ಥೆ!
ಮೈಕ್ರೋಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆದಿದ್ದ ಮಹಿಳೆಯೊಬ್ಬರು ಸಾಲ ಮರುಪಾವತಿ ಮಾಡದೇ ಇರುವ ಪರಿಣಾಮ ಸಂಸ್ಥೆ ಆಕೆಯ ಕಿರಿಯ ಮಗನನ್ನು ಅಡ ಇಟ್ಟುಕೊಂಡಿರುವ ಘಟನೆ ಜಾರ್ಖಂಡ್ ನಲ್ಲಿ ವರದಿಯಾಗಿದೆ.

ಜಾರ್ಖಂಡ್: ಮೈಕ್ರೋಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆದಿದ್ದ ಮಹಿಳೆಯೊಬ್ಬರು ಸಾಲ ಮರುಪಾವತಿ ಮಾಡದೇ ಇರುವ ಪರಿಣಾಮ ಸಂಸ್ಥೆ ಆಕೆಯ ಕಿರಿಯ ಮಗನನ್ನು ಅಡ ಇಟ್ಟುಕೊಂಡಿರುವ ಘಟನೆ ಜಾರ್ಖಂಡ್ ನಲ್ಲಿ ವರದಿಯಾಗಿದೆ. ತನಗೆ ಎದುರಾಗಿರುವ ಪರಿಸ್ಥಿತಿಯನ್ನು ಮಹಿಳೆ ಸ್ಥಳೀಯ ಪೊಲೀಸರ ಬಳಿ ಹೇಳಿಕೊಂಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿಗಳು, 14 ದಿನಗಳ ಕಾಲ ಮೈಕ್ರೋಫೈನಾನ್ಸ್ ಸಂಸ್ಥೆಯ ಸಿಬ್ಬಂದಿಗಳ ವಶದಲ್ಲಿದ್ದ ಆಕೆಯ ಮಗನನ್ನು ಬಂಧನದಿಂದ ಬಿಡಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಇಬ್ಬರು ಸಿಬ್ಬಂದಿಗಳ ವಿರುದ್ಧ ಹಾಗೂ ಇನ್ನಿತರ ಅನಾಮಿಕ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದ ಸಂಬಂಧ ಮೈಕ್ರೋಫೈನಾನ್ಸ್ ನ ಶಾಖಾ ವ್ಯವಸ್ಥಾಪಕ ನಿಗಮ್ ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಉಮಾಶಂಕರ್ ತಿವಾರಿ ಮತ್ತು ಮತ್ತೋರ್ವನಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.
ಸಂತೋಷ್ ರಾಮ್ ಎಂಬುವವರ ಪತ್ನಿ ಭಾವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗರ್ವಾ ಎಸ್ಪಿ ದೀಪಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಅಪ್ರಾಪ್ತ ವಯಸ್ಕನ ಹೇಳಿಕೆಯನ್ನು ಐಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ, ಈ ಸಂದರ್ಭದಲ್ಲಿ ವಿಷಯ ನಿಜವೆಂದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.
ಅಪ್ರಾಪ್ತ ವಯಸ್ಕನು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದರು, ಇದು ಈ ವಿಷಯದ ಬಗ್ಗೆ ಪ್ರತ್ಯೇಕ ತನಿಖೆಯನ್ನು ಪ್ರಾರಂಭಿಸಿದೆ. ಆದರೆ ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ ಎಸ್ಪಿ, ತನಿಖೆ ಇನ್ನೂ ನಡೆಯುತ್ತಿದೆ ಎಂದು ಹೇಳಿದರು.
ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ 40,000 ರೂಪಾಯಿ ಸಾಲ ಪಡೆದು 18,000 ರೂಪಾಯಿ ಬಾಕಿ ಇರುವಾಗ (ಬಡ್ಡಿ ಮೊತ್ತ ಸೇರಿದಂತೆ) 32,000 ರೂಪಾಯಿ ಮರುಪಾವತಿ ಮಾಡಿರುವುದಾಗಿ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಂಪನಿಯ ಮ್ಯಾನೇಜರ್ ನಿಗಮ್ ಯಾದವ್ ಉಳಿದ ಮೊತ್ತವನ್ನು ಮರುಪಾವತಿಸುವಂತೆ ಮಹಿಳೆಯ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಅವರು ಹೇಳಿದರು. ಮಹಿಳೆಯ ಮಗನಿಗೆ ಆತನ ಕಿಡ್ನಿಯನ್ನು ಮಾರುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




