ದೇಶ

ನಿಮ್ಮನ್ನು ಕೋರ್ಟ್ ನಿಂದ ಹೊರಗೆ ಕಳಿಸಬೇಕಾಗುತ್ತದೆ; ಗೌರವ ನೀಡದೇ ಇದ್ದಲ್ಲಿ ನಾನೇ ಹೋಗುತ್ತೇನೆ: ಸಿಜೆಐ- ವಕೀಲರ ನಡುವೆ ತೀವ್ರ ವಾಗ್ವಾದ!

ನ್ಯಾಯಾಲಯದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ನೆಡುಂಪಾರ ದೂರುತ್ತಲೇ ಇದ್ದರು. "ದಯವಿಟ್ಟು ಸೆಕ್ಯೂರಿಟಿಯನ್ನು ಕರೆಯಿರಿ. ಅವರನ್ನು ನ್ಯಾಯಾಲಯದಿಂದ ತೆಗೆದುಹಾಕುವಂತೆ ನಾವು ಕೇಳುತ್ತೇವೆ" ಎಂದು ಸಿಟ್ಟಿಗೆದ್ದ ಸಿಜೆಐ ಹೇಳಿದರು.

ನಿಮ್ಮನ್ನು ಕೋರ್ಟ್ ನಿಂದ ಹೊರಗೆ ಕಳಿಸಬೇಕಾಗುತ್ತದೆ; ಗೌರವ ನೀಡದೇ ಇದ್ದಲ್ಲಿ ನಾನೇ ಹೋಗುತ್ತೇನೆ: ಸಿಜೆಐ- ವಕೀಲರ ನಡುವೆ ತೀವ್ರ ವಾಗ್ವಾದ!
ಸಿಜೆಐ — online desk
Published On :

ನವದೆಹಲಿ: NEET-UG 2024 ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ CJI ಹಾಗೂ ವಕೀಲರ ನಡುವೆ ವಾಗ್ವಾದ ತೀವ್ರಗೊಂಡು, ಸಿಜೆಐ ವಕೀಲರಿಗೆ ಎಚ್ಚರಿಕೆ ನೀಡಿದ ಪ್ರಸಂಗಕ್ಕೆ ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು.

ಕೋರ್ಟ್ ನ ಪ್ರಕ್ರಿಯೆಗಳ ಬಗ್ಗೆ ನಿರ್ದೇಶನ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಕೀಲರಿಗೆ ಸಿಜೆಐ ಹೇಳಿದರು. ಸಿಜೆಐ ಮಾತನ್ನು ವಕೀಲರು ನಿರ್ಲಕ್ಷ್ಯಿಸಿದಾಗ ತೀವ್ರ ಅಸಮಾಧಾನಗೊಂಡ ಸಿಜೆಐ ಚಂದ್ರಚೂಡ್, ನಿಮ್ಮನ್ನು ಕೋರ್ಟ್ ನಿಂದ ಹೊರಗೆ ಕಳುಹಿಸಬೇಕಾಗುತ್ತದೆ, ಇದು ನಿಮಗೆ ನೀಡುತ್ತಿರುವ ಎಚ್ಚರಿಕೆ ಎಂದು ಅಡ್ವೊಕೇಟ್ ಮ್ಯಾಥ್ಯೂಸ್ ಜೆ ನೆಡುಂಪಾರಗೆ ಸಿಜೆಐ ಹೇಳಿದ್ದಾರೆ.

ಅಡ್ವೊಕೇಟ್ ಮ್ಯಾಥ್ಯೂಸ್ ಜೆ ನೆಡುಂಪಾರ ಕೆಲವು ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದು, ಮುಖ್ಯ ವಕೀಲರಾದ ನರೇಂದ್ರ ಹೂಡಾ ತಮ್ಮ ವಾದವನ್ನು ಮುಂದುವರೆಸುತ್ತಿದ್ದಾಗ, ತಮಗೂ ವಾದ ಮಂಡಿಸಲು ಅವಕಾಶ ಮಾಡಿಕೊಡಬೇಕೆಂದು ಪದೇ ಪದೇ ಆಗ್ರಹಿಸುತ್ತಿದ್ದರು.

ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೂಡಾ ಅವರು ತಮ್ಮ ವಾದ ಮಂಡಿಸಿದ ನಂತರ ವಾದಿಸಲು ಅವಕಾಶ ನೀಡುತ್ತದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ನೆಡುಂಪಾರ ಅವರಿಗೆ ತಿಳಿಸಿದರು.

ಆದರೆ ಸಿಜೆಐ ಮಾತನ್ನು ಕೇಳಿಸಿಕೊಳ್ಳದೇ ನೆಡುಂಪಾರ ಪದೇ ಪದೇ ಮಾತು ಮುಂದುವರೆಸಿದ ಕಾರಣ, ಅಸಮಾಧಾನಗೊಂಡ ಸಿಜೆಐ, ನೀವು ಕುಳಿತುಕೊಳ್ಳದೇ ಇದ್ದಲ್ಲಿ ನಿಮ್ಮನ್ನು ಕೋರ್ಟ್ ನಿಂದ ಹೊರ ಹಾಕಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ವಕೀಲರು, ನ್ಯಾಯಮೂರ್ತಿಗಳಿಂದ ನನಗೆ ಗೌರವ ಸಿಗದೇ ಇದ್ದಲ್ಲಿ, ನಾನೇ ಕೋರ್ಟ್ ನಿಂದ ಹೊರನಡೆಯುತ್ತೇನೆ ಎಂದು ಹೇಳಿದರು.

ಆದರೆ, ನ್ಯಾಯಾಲಯದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ನೆಡುಂಪಾರ ದೂರುತ್ತಲೇ ಇದ್ದರು. "ದಯವಿಟ್ಟು ಸೆಕ್ಯೂರಿಟಿಯನ್ನು ಕರೆಯಿರಿ. ಅವರನ್ನು ನ್ಯಾಯಾಲಯದಿಂದ ತೆಗೆದುಹಾಕುವಂತೆ ನಾವು ಕೇಳುತ್ತೇವೆ" ಎಂದು ಸಿಟ್ಟಿಗೆದ್ದ ಸಿಜೆಐ ಹೇಳಿದರು.

"ನೀವು ಜನಪ್ರಿಯತೆಗಾಗಿ ಮಾತನಾಡಬೇಕಿಲ್ಲ. ನೀವು ನನ್ನ ಮಾತನ್ನು ಕೇಳಬೇಕಾಗುತ್ತದೆ. ನನ್ನ ನ್ಯಾಯಾಲಯದ ಉಸ್ತುವಾರಿಯನ್ನು ನಾನು ಹೊಂದಿದ್ದೇನೆ" ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. ಈ ವೇಳೆ ವಕೀಲರು ಬೆಂಬಲಕ್ಕಾಗಿ ತಮ್ಮ ಸಹೋದ್ಯೋಗಿಗಳ ಕಡೆಗೆ ತಿರುಗಿದರು.

ಅಸಮಾಧಾನಗೊಂಡ ಅಡ್ವೊಕೇಟ್, ತಾವು ಕೋರ್ಟ್ ನಿಂದ ಹೊರಹೋಗುವುದಾಗಿ ಪದೇ ಪದೇ ಹೇಳುತ್ತಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಜೆಐ, ನಾನು ನಿಮ್ಮ ವಾದ ಆಲಿಸುತ್ತೆನೆ, ಹೂಡಾ ಅವರ ವಾದ ಮಂಡನೆ ಮುಕ್ತಾಯವಾಗಲಿ ಆ ಬಳಿಕ ನಿಮ್ಮ ವಾದ ಕೇಳುತ್ತೇನೆ, ಅದಕ್ಕೂ ಮುನ್ನ ನೀವು ಕೋರ್ಟ್ ನಿಂದ ಹೊರನಡೆಯುವುದಾದರೆ ಅದು ನಿಮ್ಮ ಇಷ್ಟ ಎಂದು ಹೇಳಿದರು.

ಈ ಪ್ರಹಸನದಿಂದಾಗಿ ಕೋರ್ಟ್ ಕಲಾಪ, ಶಾಸನ ಸಭೆಯಂತೆ ಭಾಸವಾಯಿತು ಎಂದು ವಿಡಿಯೋ ಹಂಚಿಕೊಂಡ ನೆಟ್ಟಿಗರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.