ಸಂದೇಶ್‌ಖಾಲಿ ಲೈಂಗಿಕ ಕಿರುಕುಳ, ಭೂ ಕಬಳಿಕೆ ಪ್ರಕರಣ: ಮುಖ್ಯ ಆರೋಪಿ ಟಿಎಂಸಿ ನಾಯಕ ಶಾಜಹಾನ್ ಬಂಧನ
ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಪ್ರಕರಣದ ಮುಖ್ಯ ಆರೋಪಿಯಾಗಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಶಾಜಹಾನ್ ಶೇಖ್ ಅವರನ್ನು ಬಂಧಿಸಲಾಗಿದೆ.

ಕೋಲ್ಕತ್ತ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪದ ಆರೋಪಿ ಟಿಎಂಸಿ ನಾಯಕ ಶಾಜಹಾನ್ ಶೇಖ್‌ನನ್ನು ಗುರುವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
55 ದಿನಗಳಿಂದ ತಲೆಮರೆಸಿಕೊಂಡಿದ್ದ ಶಾಜಹಾನ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸ್ ವಿಶೇಷ ಪಡೆಯು 'ಉತ್ತರ 24 ಪರಗಣ' ಜಿಲ್ಲೆಯಲ್ಲಿ ತಡರಾತ್ರಿ ಬಂಧಿಸಿದೆ.
ಬಳಿಕ ಬಸಿರ್ಹತ್ ನ್ಯಾಯಾಲಯಕ್ಕೆ ಕರೆದೊಯ್ದಿದೆ. ವಿಶೇಷ ತಂಡವು ಶೇಖ್ ಅವರ ಚಲನವಲನಗಳ ಮೇಲೆ ಹಲವು ದಿನಗಳಿಂದ ಕಣ್ಣಿಟ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿಎಂಸಿ ನಾಯಕ ಹಾಗೂ ಆತನ ಬೆಂಬಲಿಗರು, ಬಲವಂತವಾಗಿ ತಮ್ಮ ಭೂಕಬಳಿಕೆ ಮಾಡಿದ್ದಾರೆ ಮತ್ತು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಹಲವು ಮಂದಿ ಮಹಿಳೆಯರು ಆರೋಪಿಸಿದ್ದರು. ಅದಾದ ಬಳಿಕ, 'ಉತ್ತರ 24 ಪರಗಣ' ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿವೆ.
2019ರಲ್ಲಿ ನಡೆದ ಬಿಜೆಪಿಯ ಮೂವರು ಕಾರ್ಯಕರ್ತರ ಕೊಲೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಶೇಖ್, ಜನವರಿ 5ರಿಂದ ನಾಪತ್ತೆಯಾಗಿದ್ದರು. ಶೇಖ್, ಪಡಿತರ ಅಕ್ರಮ ಹಾಗೂ ಭೂ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವೂ ಪ್ರಕರಣ ದಾಖಲಿಸಿಕೊಂಡಿದೆ.
ಟಿಎಂಸಿ ನಾಯಕ ಶಾಜಹಾನ್ ಶೇಖ್ ಅವರನ್ನು ಬಂಧಿಸುವಂತೆ ಕೊಲ್ಕತ್ತಾ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ ವಿ ಆನಂದ ಬೋಸ್ ಅವರು ಸಂದೇಶಖಾಲಿಯಲ್ಲಿ ಶಹಜಹಾನ್ ನಡೆಸಿದ ದೌರ್ಜನ್ಯದ ಬಗ್ಗೆ ವಿವರವಾಗಿ 72 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂದೇಶಖಾಲಿಯಲ್ಲಿ ಮಗುವನ್ನು ದುಷ್ಕರ್ಮಿಗಳು ಎಸೆದ ಘಟನೆಯ ಕುರಿತು ತನಿಖೆ ನಡೆಸಿ ವರದಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




