ದೇಶ

ಮಧ್ಯ ಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಭೀಕರ ಅಪಘಾತ: 14 ಮಂದಿ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪಿಕಪ್ ವಾಹನ

ಮಧ್ಯ ಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಭೀಕರ ಅಪಘಾತ: 14 ಮಂದಿ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
ಪಲ್ಟಿಯಾಗಿ ಬಿದ್ದ ಪಿಕಪ್ ವಾಹನ
Published On :

ದಿಂಡೋರಿ(ಮಧ್ಯ ಪ್ರದೇಶ): ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿಯಾದ ಪರಿಣಾಮ ಕನಿಷ್ಠ 14 ಮಂದಿ ಮೃತಪಟ್ಟು, 20 ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳು ಶಹಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಸುಕಿನ ಜಾವ ದುರ್ಘಟನೆ ನಡೆದಿದೆ. ಸಂತ್ರಸ್ತರು ದೇವ ಭಾರೈ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ ಘಟನೆ ಸಂಭವಿಸಿದೆ.

ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಬಿಚಿಯಾ-ಬರ್ಜಾರ್ ಗ್ರಾಮದಲ್ಲಿ ಪಿಕಪ್ ವಾಹನ ನಿಯಂತ್ರಣ ತಪ್ಪಿ 25 ಅಡಿ ಆಳದ ಹೊಲಕ್ಕೆ ಉರುಳಿ ಬಿದ್ದಿದೆ. ಅಪಘಾತದ ಸಮಯದಲ್ಲಿ, ವಾಹನದಲ್ಲಿದ್ದ ಸುಮಾರು 35 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದರು.

ಘಟನೆಯ ನಂತರ, ಪೊಲೀಸರು ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಶಹಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ, ಮೃತರನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮುಖ್ಯಮಂತ್ರಿ ಸಂತಾಪ: ವಾಹನ ಅಪಘಾತದಲ್ಲಿ ಜೀವ ಕಳೆದುಕೊಂಡವರ ಬಗ್ಗೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಡಾ ಮೋಹನ್ ಯಾದವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬದ ಸದಸ್ಯರಿಗೆ ಈ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಕೇಳಿಕೊಂಡಿದ್ದಾರೆ.

ಪರಿಹಾರ: ಸಂತ್ರಸ್ತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಂಪುಟ ಸಚಿವೆ ಶ್ರೀಮತಿ. ಸಂಪತಿಯ ಉಯ್ಕೆ ಡಿಂಡೋರಿಗೆ ತೆರಳಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.

ಪ್ರಧಾನ ಮಂತ್ರಿ ಪರಿಹಾರ ಘೋಷಣೆ: ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(PMNRF)ಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರ ಚಿಕಿತ್ಸೆಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಈ ಕುರಿತು ಟ್ವೀಟ್ ಮೂಲಕ ಪ್ರಕಟಿಸಿರುವ ಪ್ರಧಾನ ಮಂತ್ರಿ ಕಾರ್ಯಾಲಯವು, ಮಧ್ಯ ಪ್ರದೇಶದ ದಿಂಡೋರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ನೀಡಲಾಗುವುದು ಎಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.