ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್. ಸ್ವಾಮಿನಾಥನ್ ವಿಧಿವಶ
ವಿಶ್ವ ಕಂಡ ಶ್ರೇಷ್ಠ ಕೃಷಿ ವಿಜ್ಞಾನಿ, ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಪ್ರಖ್ಯಾತರಾದ ಡಾ. ಮೊಂಕೊಂಬ ಸಾಂಬಶಿವನ್ ಸ್ವಾಮಿನಾಥನ್ (98) ಅವರು ಬುಧವಾರ ಚೆನ್ನೈನಲ್ಲಿ ನಿಧರಾಗಿದ್ದಾರೆ.

ಚೆನ್ನೈ: ವಿಶ್ವ ಕಂಡ ಶ್ರೇಷ್ಠ ಕೃಷಿ ವಿಜ್ಞಾನಿ, ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಪ್ರಖ್ಯಾತರಾದ ಡಾ. ಮೊಂಕೊಂಬ ಸಾಂಬಶಿವನ್ ಸ್ವಾಮಿನಾಥನ್ (98) ಅವರು ಬುಧವಾರ ಚೆನ್ನೈನಲ್ಲಿ ನಿಧರಾಗಿದ್ದಾರೆ.
ಚೆನ್ನೈನಲ್ಲಿ ವಾಸವಿದ್ದ ಸ್ವಾಮಿನಾಥನ್ ಅವರು, ವಯೋಸಹಜವಾಗಿ ಇಂದು ಸಾವನ್ನಪ್ಪಿದ್ದಾರೆ. ಎಂಎಸ್ ಸ್ವಾಮಿನಾಥನ್ ಅವರ ಪತ್ನಿ ಮಿನಾ ಸ್ವಾಮಿನಾಥನ್ ಅವರು ಕಳೆದ ವರ್ಷ ನಿಧನರಾಗಿದ್ದರು. ಸ್ವಾಮಿನಾಥನ್ ಅವರು ಈಗ ಮೂವರು ಪುತ್ರಿಯರಾದ ಸೌಮ್ಯ ಸ್ವಾಮಿನಾಥನ್, ಮಥುರಾ ಸ್ವಾಮಿನಾಥನ್ ಮತ್ತು ನಿತ್ಯ ಸ್ವಾಮಿನಾಥನ್ ಅವರನ್ನು ಅಗಲಿದ್ದಾರೆ. ಸ್ವಾಮಿನಾಥನ್ ಅವರ ಅಗಲಿಕೆಗೆ ಪ್ರಧಾನಂತ್ರಿ ನರೇಂದ್ರ ಮೋದಿ ಸೇರಿದಂತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಆಗಸ್ಟ್ 7, 1925 ರಂದು ಕುಂಭಕೋಣಂ ಜಿಲ್ಲೆಯಲ್ಲಿ ಜನಿಸಿದ ಸ್ವಾಮಿನಾಥನ್ ಅವರು ತಮ್ಮ ಸ್ವಂತ ಊರಿನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮವು ಸ್ವಾಮಿನಾಥನ್ ಅವರನ್ನು ‘ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ’ ಎಂದು ಬಣ್ಣಿಸಿದೆ.
1960 ಹಾಗೂ 70ರ ದಶಕದಲ್ಲಿ ರಾಸಾಯನಿಕ ಹಾಗೂ ಜೈವಿಕ ತಂತ್ರಜ್ಞಾನದ ಮೂಲಕ ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಹೆಚ್ಚಿಸಲು ರೂಪಿಸಲಾದ ಹಸಿರು ಕ್ರಾಂತಿ ಯೋಜನೆಯಲ್ಲಿ ಕೇಂದ್ರ ಕೃಷಿ ಸಚಿವರಾಗಿದ್ದ ಸಿ.ಸುಬ್ರಮಣಿಯಂ, ಜಗಜೀವನ್ ರಾಮ್ ಅವರೊಂದಿಗೆ ಸ್ವಾಮಿನಾಥನ್ ಕೆಲಸ ಮಾಡಿದ್ದರು.
ಅಧಿಕ ಇಳುವರಿಯ ಭತ್ತ ಹಾಗೂ ಗೋಧಿ ತಳಿಯ ಅಭಿವೃದ್ಧಿಗಾಗಿ 1987ರಲ್ಲಿ ಅವರಿಗೆ ಜಾಗತಿಕ ಆಹಾರ ಬಹುಮಾನ ಲಭಿಸಿತ್ತು. ಅದರಿಂದ ಬಂದ ಹಣದಲ್ಲಿ ಅವರು ಚೆನ್ನೈನಲ್ಲಿ ಎಂ.ಎಸ್.ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನವನ್ನು ಆರಂಭಿಸಿದರು. 1971ರಲ್ಲಿ ರೇಮನ್ ಮ್ಯಾಗ್ಸೆಸೆ ಹಾಗೂ 1986ರಲ್ಲಿ ಆಲ್ಬರ್ಟ್ ಐನ್ಸ್ಟೀನ್ ವಿಶ್ವ ವಿಜ್ಞಾನ ಪ್ರಶಸ್ತಿಗಳೂ ಅವರಿಗೆ ಸಂದಿವೆ.
ಇವುಗಳೊಂದಿಗೆ ಪದ್ಮ ಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳು ಸಹ ಸ್ವಾಮಿನಾಥನ್ ಅವರಿಗೆ ಸಂದಿವೆ. ಎಚ್.ಕೆ.ಫಿರೋದಿಯಾ ಪ್ರಶಸ್ತಿ, ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಇಂದಿರಾ ಗಾಂಧಿ ಪ್ರಶಸ್ತಿಗಳೂ ಸ್ವಾಮಿನಾಥನ್ ಅವರಿಗೆ ಲಭಿಸಿವೆ.
ದೇಶದ ಕೃಷಿ ಕ್ಷೇತ್ರದಲ್ಲೇ ಅಲ್ಲದೆ, ಜಾಗತಿಕ ಮಟ್ಟದಲ್ಲಿ ಸ್ವಾಮಿನಾಥನ್ ಅವರ ಕಾರ್ಯ ಹೆಚ್ಚು ಜನಪ್ರಿಯ. ಜಾಗತಿಕ ಮಟ್ಟದ ಹಲವು ಕೃಷಿ ಹಾಗೂ ಪರಿಸರ ಜಾಗೃತಿ ಕುರಿತ ಕಾರ್ಯಕ್ರಮಗಳಲ್ಲಿ ಅವರು ಸಕ್ರೀಯರಾಗಿದ್ದರು. ಟೈಮ್ ನಿಯತಕಾಲಿಕೆ ಪ್ರಕಟಿಸಿದ 20ನೇ ಶತಮಾನದ 20 ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ಸ್ವಾಮಿನಾಥನ್ ಅವರ ಹೆಸರು ಸೇರಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


