ಮದ್ಯ ಹಗರಣ: ಆಂಧ್ರ ಪ್ರದೇಶ ಸಿಐಡಿಯಿಂದ ಚಂದ್ರಬಾಬು ನಾಯ್ಡು ವಿರುದ್ಧ ಎಫ್ಐಆರ್ ದಾಖಲು
ಆಂಧ್ರಪ್ರದೇಶ ಅಪರಾಧ ತನಿಖಾ ಇಲಾಖೆ(ಎಪಿಸಿಐಡಿ) ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ವಿರುದ್ಧ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಿಸಿದೆ.

ವಿಜಯವಾಡ: ಆಂಧ್ರಪ್ರದೇಶ ಅಪರಾಧ ತನಿಖಾ ಇಲಾಖೆ(ಎಪಿಸಿಐಡಿ) ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ವಿರುದ್ಧ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಿಸಿದೆ. ಇದು ನಾಯ್ಡು ವಿರುದ್ಧ ರಾಜ್ಯ ತನಿಖಾ ಸಂಸ್ಥೆ ದಾಖಲಿಸಿ ನಾಲ್ಕನೇ ಪ್ರಕರಣವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸೋಮವಾರ ಎಸಿಬಿ ವಿಶೇಷ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದಾರೆ. ನಾಯ್ಡು, ಮಾಜಿ ಅಬಕಾರಿ ಸಚಿವ ಕೊಲ್ಲು ರವೀಂದ್ರ ಮತ್ತು ಆಂಧ್ರಪ್ರದೇಶ ಸ್ಟೇಟ್ ಬೆವರೇಜಸ್ ಕಾರ್ಪೊರೇಷನ್ ಲಿಮಿಟೆಡ್ (ಎಪಿಎಸ್ಬಿಸಿಎಲ್) ಮಾಜಿ ಕಮಿಷನರ್ ನರೇಶ್ ವಿರುದ್ಧ, ಕೆಲವು ಪೂರೈಕೆದಾರರು ಮತ್ತು ಡಿಸ್ಟಿಲರಿಗಳಿಗೆ ಅನುಕೂಲ ಮಾಡಿಕೊಟ್ಟು, ಮದ್ಯದ ಪರವಾನಗಿ ನೀಡಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಸಿಐಡಿ ಅಧಿಕಾರಿಗಳು ಅಕ್ಟೋಬರ್ 28 ರಂದು ಐಪಿಸಿ ಸೆಕ್ಷನ್ 166, 167, 409, 120(ಬಿ) ಆರ್/ಡಬ್ಲ್ಯೂ 34 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 (1)(ಡಿ) ಆರ್/ಡಬ್ಲ್ಯು 13(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಎಪಿಎಸ್ಬಿಸಿಎಲ್ ಆಯುಕ್ತ ಡಿ ವಾಸುದೇವ ರೆಡ್ಡಿ ಅವರು ದೂರು ನೀಡಿದ್ದು, ಎಫ್ಐಆರ್ನಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಎ3, ಕೊಲ್ಲು ರವೀಂದ್ರ ಅವರನ್ನು ಎ2 ಮತ್ತು ನರೇಶ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.
ದೂರಿನ ಪ್ರಕಾರ, 2014-2019ರ ಅವಧಿಯಲ್ಲಿ ಅಂದಿನ ಎಪಿಎಸ್ಬಿಸಿಎಲ್ನ ಆಯುಕ್ತರು ರಾಜ್ಯದ ಆದಾಯವನ್ನು ಪರಿಶೀಲಿಸುವಾಗ ಹಿಂದಿನ ಸರ್ಕಾರದ ನೀತಿ ನಿರ್ಧಾರಗಳಲ್ಲಿ ಹಲವಾರು ವ್ಯತ್ಯಾಸಗಳನ್ನು ಮಾಡಿದ್ದಾರೆ. ರಾಜ್ಯ ಸರ್ಕಾರ ರಚಿಸಿದ ಸಮಿತಿಯ ಶಿಫಾರಸುಗಳಿಗೆ ವಿರುದ್ಧವಾಗಿ ಅಕ್ರಮವಾಗಿ ಲೆಟರ್ ಆಫ್ ಇಂಟೆಂಟ್(LOI) ನೀಡುವ ಮೂಲಕ ಕೆಲವು ಡಿಸ್ಟಿಲರಿಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


