ದೇಶ

ಮಣಿಪುರ ನಗ್ನ ವೈರಲ್ ವಿಡಿಯೋ ಪ್ರಕರಣ: ಸಿಬಿಐ ತನಿಖೆಗೆ ಆದೇಶ; ಮಣಿಪುರದಿಂದ ಹೊರಗೆ ವಿಚಾರಣೆ ಕೋರಿ ಸುಪ್ರೀಂ'ಗೆ ಮನವಿ

ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿಸಿ ಮೆರವಣಿಗೆ ಮಾಡಿ, ಕಿರುಕುಳ ನೀಡಿದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ವಹಿಸಿರುವ ಕೇಂದ್ರ ಸರ್ಕಾರ, ಪ್ರಕರಣದ ವಿಚಾರಣೆಯನ್ನು ಮಣಿಪುರದಿಂದ ಹೊರಗೆ ನಡೆಸಲು ಆದೇಶಿಸುವಂತೆ ಸುಪ್ರೀಂ ಕೋರ್ಟ್ ಬಳಿ ಮನವಿ ಮಾಡಿಕೊಂಡಿದೆ.

ಮಣಿಪುರ ನಗ್ನ ವೈರಲ್ ವಿಡಿಯೋ ಪ್ರಕರಣ: ಸಿಬಿಐ ತನಿಖೆಗೆ ಆದೇಶ; ಮಣಿಪುರದಿಂದ ಹೊರಗೆ ವಿಚಾರಣೆ ಕೋರಿ ಸುಪ್ರೀಂ'ಗೆ ಮನವಿ
ಸಂಗ್ರಹ ಚಿತ್ರ
Published On :

ನವದೆಹಲಿ: ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿಸಿ ಮೆರವಣಿಗೆ ಮಾಡಿ, ಕಿರುಕುಳ ನೀಡಿದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ವಹಿಸಿರುವ ಕೇಂದ್ರ ಸರ್ಕಾರ, ಪ್ರಕರಣದ ವಿಚಾರಣೆಯನ್ನು ಮಣಿಪುರದಿಂದ ಹೊರಗೆ ನಡೆಸಲು ಆದೇಶಿಸುವಂತೆ ಸುಪ್ರೀಂ ಕೋರ್ಟ್ ಬಳಿ ಮನವಿ ಮಾಡಿಕೊಂಡಿದೆ.

ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅಫಿಡವಿಟ್ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಣಿಪುರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಹಿಂಸಾಚಾರ ಪ್ರಕರಣಗಳ ವಿಚಾರಣೆಯನ್ನು 6 ತಿಂಗಳೊಳಗೆ ಪೂರ್ಣಗೊಳಿಸುವಂತೆ ಆದೇಶಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಮಹಿಳೆಯರ ವಿರುದ್ಧದ ಅಪರಾಧ ವಿಶೇಷವಾಗಿ ಮಣಿಪುರದಲ್ಲಿ ನಡೆದಿರುವಂತಹ ಹೀನ ಅಪರಾಧವನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದಲ್ಲಿ ನ್ಯಾಯದಾನ ಮಾಡುವ ಮೂಲಕ ದೇಶದಲ್ಲಿ ಇಂತಹ ಘಟನೆ ಮರುಕಳಿಸದಂತೆ ಮಾಡಲಾಗುವುದು. ಪ್ರಕರಣದ ಸ್ವತಂತ್ರ ತನಿಖೆಗೆ ಆದೇಶಕ್ಕೆ ಇದು ಒಂದು ಕಾರಣ ಎಂದು ಕೇಂದ್ರ ಸರ್ಕಾರದ ಪರವಾಗಿ ತಿಳಿಸಿದರು.

ಪ್ರಕರಣವನ್ನು ತುರ್ತಾಗಿ ತನಿಖೆ ನಡೆಸಿ, ಕಾಲಮಿತಿಯಲ್ಲಿ ವಿಚಾರಣೆ ಪೂರ್ಣಗೊಳಿಸಲಾಗುವುದು. ಹೀಗಾಗಿ ಮಣಿಪುರದಿಂದ ಹೊರಗೆ ವಿಚಾರಣೆ ನಡೆಯಬೇಕು. ಈ ನಿಟ್ಟಿನಲ್ಲಿ ವಿಚಾರಣೆ ವರ್ಗಾವಣೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ಸಾಮಾಜಿಕ ಜಾಲತಾಣದಲ್ಲಿ ಈ ಮಣಿಪುರದಲ್ಲಿ ನಡೆದ ಹೇಯ ಕೃತ್ಯದ ವಿಡಿಯೊ ವೈರಲ್‌ ಆದ ಬಳಿಕ ಸ್ವಯಂಪ್ರೇರಿತವಾಗಿ ಸುಪ್ರೀಂ ಕೋರ್ಟ್‌ ಪ್ರಕರಣ ದಾಖಲಿಸಿಕೊಂಡಿದೆ. ಪ್ರಕರಣಕ್ಕೆ ಕೇಂದ್ರ ಸರ್ಕಾರವು ಇಂದು ಅಫಿಡವಿಟ್‌ ಸಲ್ಲಿಸಿದೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಸಂಬಂಧಿಸಿದಂತೆ ಯಾವೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂದು ಜುಲೈ 20ರಂದು ಸಿಜೆಐ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ತ್ರಿಸದಸ್ಯ ಪೀಠವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.

ಇದಕ್ಕೆ ಪೂರಕವಾಗಿ ಅಫಿಡವಿಟ್‌ ಸಲ್ಲಿಸಲಾಗಿದೆ. ಪ್ರಕರಣ ಸಂಬಂಧ ಈವರೆಗೂ ಏಳು ಮಂದಿಯನ್ನು ಬಂಧಿಸಲಾಗಿದ್ದು, ಅವರು ಪೊಲೀಸ್ರ ವಶದಲ್ಲಿದ್ದಾರೆ. ಆರೋಪಿಗಳ ವಿರುದ್ದ ಅತ್ಯಾಚಾರ, ಕೊಲೆ ಆರೋಪದಡಿ ದೂರು ದಾಖಲಿಸಲಾಗಿದೆ ಎಂದು ವಿವರಿಸಲಾಗಿದೆ.

ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ವಿಚಾರಣೆ ನಡೆಸಬೇಕಿತ್ತು. ಆದರೆ, ಅನಾರೋಗ್ಯ ಕಾರಣದಿಂದಾಗಿ ಸಿಜೆಐ ಲಭ್ಯವಿಲ್ಲದ ಕಾರಣ ವಿಚಾರಣೆ ಸಾಧ್ಯವಾಗಿಲ್ಲ.

ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮಾನ್ಯತೆ ನೀಡುವುದಕ್ಕೆ ವಿರೋಧಿಸಿ ಕೆಲವು ಪಂಗಡಗಳು ಆಕ್ಷೇಪಿಸಿರುವುದು ರಾಜ್ಯದಲ್ಲಿ ಗಲಭೆಗೆ ಕಾರಣವಾಗಿದೆ.

ಏಪ್ರಿಲ್‌ 19ರಂದು ಮೈತೇಯಿ ಸಮುದಾಯವನ್ನು ಎಸ್‌ಟಿ ಪಟ್ಟಿಯಲ್ಲಿ ಒಂದು ತಿಂಗಳೊಳಗೆ ಸೇರ್ಪಡೆ ಮಾಡಲು ಮಣಿಪುರ ಸರ್ಕಾರಕ್ಕೆ ಮಣಿಪುರ ಹೈಕೋರ್ಟ್‌ ನಿರ್ದೇಶಿಸಿತ್ತು. ಇದು ಬುಡಕಟ್ಟು ಮತ್ತು ಬುಡಕಟ್ಟೇತರ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

ಗಲಭೆಯ ನಡುವೆ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಲೈಂಗಿಕ ಕಿರುಕುಳ ನೀಡುತ್ತಾ ಅವರನ್ನು ಮೆರವಣಿಗೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಘಟನೆಯು ಮೇ 4ರಂದು ನಡೆದಿದ್ದು, ಉದ್ರಿಕ್ತರ ಗುಂಪು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ವರದಿಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.