ದೇಶ

ಮಣಿಪುರ ಹಿಂಸಾಚಾರ: 'ದುಷ್ಕರ್ಮಿಗಳ ನಡುವೆ ಪೊಲೀಸರು ಬಿಟ್ಟು ಹೋದರು'..; ಬೆತ್ತಲೆ ಮೆರವಣಿಗೆ, ಅತ್ಯಾಚಾರ ಸಂತ್ರಸ್ಥೆಯ ಹೇಳಿಕೆ

ಪೊಲೀಸರೇ ದುಷ್ಕರ್ಮಿಗಳ ನಡುವೆ ಬಿಟ್ಟು ಹೋದರು ಎಂದು ಮಣಿಪುರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಸಂತ್ರಸ್ಥೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಣಿಪುರ ಹಿಂಸಾಚಾರ: 'ದುಷ್ಕರ್ಮಿಗಳ ನಡುವೆ ಪೊಲೀಸರು ಬಿಟ್ಟು ಹೋದರು'..; ಬೆತ್ತಲೆ ಮೆರವಣಿಗೆ, ಅತ್ಯಾಚಾರ ಸಂತ್ರಸ್ಥೆಯ ಹೇಳಿಕೆ
ಸಂತ್ರಸ್ಥೆ (ಸಂಗ್ರಹ ಚಿತ್ರ)
Published On :

ಇಂಫಾಲ: ಪೊಲೀಸರೇ ದುಷ್ಕರ್ಮಿಗಳ ನಡುವೆ ಬಿಟ್ಟು ಹೋದರು ಎಂದು ಮಣಿಪುರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಸಂತ್ರಸ್ಥೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ರಾಜಧಾನಿ ಇಂಫಾಲ್‌ನಿಂದ ಸುಮಾರು 35 ಕಿಮೀ ದೂರದಲ್ಲಿರುವ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಜನರ ಗುಂಪೊಂದು ಮೂವರು ಮಹಿಳೆಯರನ್ನು ಥಳಿಸಿ ಬೆತಲ್ಲೆಗೊಳಿಸಿ ಅವರನ್ನು ಮೆರವಣಿಗೆ ಮಾಡಿದ್ದು ಮಾತ್ರವಲ್ಲದೇ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಈ ಭಯಾನಕ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆದ ಒಂದು ದಿನದ ನಂತರ ಮಣಿಪುರ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. 

ಮಣಿಪುರ ಹಿಂಸಾಚಾರದ ನಡುವೆಯೇ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಯಾದ ಬೆನ್ನಲ್ಲೇ ಸ್ವತಃ ಅಂದು ನಡೆದ ಬೆತ್ತಲೆ ಮೆರವಣಿಗೆಯ ಸಂತ್ರಸ್ಥೆ ಕುಕಿ ಮಹಿಳೆಯೊಬ್ಬರು ಪ್ರತಿಕ್ರಿಯೆ ನೀಡಿದ್ದು,  ‘ಪೊಲೀಸರು ನಮ್ಮನ್ನು ಜನಸಮೂಹದೊಂದಿಗೆ ಬಿಟ್ಟು ಹೋಗಿದ್ದರು ಎಂದು ಅಂದಿನ ಭೀಕರ ಸಂದರ್ಭವನ್ನು ವಿವರಿಸಿದ್ದಾರೆ.

ಸಂತ್ರಸ್ತೆಯರಲ್ಲಿ ಒಬ್ಬರಾಗಿರುವ 20 ವರ್ಷದ ಮಹಿಳೆ ದುಷ್ಕರ್ಮಿಗಳು ನಮ್ಮನ್ನು ಎಳೆದೊಯ್ಯುತ್ತಿದ್ದಾಗ ಅಲ್ಲಿದ್ದ ಪೊಲೀಸರು ನಮ್ಮನ್ನು ಜನಸಮೂಹಕ್ಕೆ ಒಪ್ಪಿಸಿ ಏನೂ ಕ್ರಮ ಕೈಗೊಳ್ಳದೇ ಹೊರಟು ಹೋದರು ಎಂದು ಹೇಳಿದ್ದಾರೆ.

'ಕೊಲೆಗಡುಕ ಗುಂಪು ತಮ್ಮ ಹಳ್ಳಿಯ ಮೇಲೆ ದಾಳಿ ನಡೆಸಿದಾಗ, ಅವರ ಜೊತೆಯಲ್ಲಿ ಪೊಲೀಸರು ಇದ್ದರು. ದುಷ್ಕರ್ಮಿಗಳು ಮಹಿಳೆಯರನ್ನು ಎತ್ತಿಕೊಂಡು ತಮ್ಮ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಸ್ಥಳದಲ್ಲಿ ಜನಸಮೂಹದೊಂದಿಗೆ ರಸ್ತೆ ಮೇಲೆ ಎಳೆದಾಡಿದರು. ಆದರೆ ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಪೊಲೀಸರು ಏನೂ ಕ್ರಮ ಕೈಗೊಳ್ಳದೇ ನಮ್ಮನ್ನು ಅವರಿಗೆ ಒಪ್ಪಿಸಿ ಹೊರಟು ಹೋದರು. ನಮ್ಮ ತಂದೆ ಮತ್ತು ಸಹೋದರನನ್ನೂ ಇದೇ ದುಷ್ಕರ್ಮಿಗಳ ಗುಂಪು ಕೊಂದು ಹಾಕಿದೆ. ಬಳಿಕ ನಮ್ಮನ್ನು ಬೆತ್ತಲೆ ಮಾಡಿ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರದ ಬಳಿಕ ನಾವು ಅವರಿಂದ ತಪ್ಪಿಸಿಕೊಂಡು ಓಡಿ ಹೋಗಿ ಜೀವ ಉಳಿಸಿಕೊಂಡೆವು ಎಂದು ಹೇಳಿದ್ದಾರೆ.

ಈ ಪ್ರಕರಣದ ವಿಚಾರವಾಗಿ ಮೇ 18 ರಂದು ಪೊಲೀಸ್ ದೂರು ದಾಖಲಿಸಲಾಗಿದೆ. ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದ್ದು, ಪೊಲೀಸರಿಗೆ ನೀಡಲಾಗಿರುವ ದೂರಿನಲ್ಲಿ 20 ವರ್ಷದ ಕಿರಿಯ ಮಹಿಳೆ ಮೇಲೆ ದುಷ್ಕರ್ಮಿಗಳು ಕ್ರೂರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅಂತೆಯೇ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಮಹಿಳೆಯರು ವಾಸಿಸುತ್ತಿದ್ದ ಗ್ರಾಮವನ್ನು ಕಾಂಗ್ಪೋಕ್ಪಿ ಜಿಲ್ಲೆಯ ಬಿ ಫೈನೋಮ್ ಗ್ರಾಮ ಎಂದು ಗುರುತಿಸಲಾಗಿದೆ. ಜುಲೈ 19 ರಂದು ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳ ವಿರುದ್ಧ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ (ತೌಬಲ್ ಜಿಲ್ಲೆ) ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.