ದೇಶ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಗುಂಡೇಟಿಗೆ ಮಹಿಳೆ ಸಾವು, 3 ಟ್ರಕ್ ಗಳಿಗೆ ಬೆಂಕಿಗಾಹುತಿ

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಗಲಭೆ ಭುಗಿಲೆದ್ದಿದ್ದು, ರಾಜಧಾನಿ ಪೂರ್ವ ಇಂಫಾಲ್​​ನಲ್ಲಿ (Imphal) ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಗುಂಡೇಟಿಗೆ ಮಹಿಳೆ ಸಾವು, 3 ಟ್ರಕ್ ಗಳಿಗೆ ಬೆಂಕಿಗಾಹುತಿ
ಮಣಿಪುರದಲ್ಲಿ ಹಿಂಸಾಚಾರ
Published On :

ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಗಲಭೆ ಭುಗಿಲೆದ್ದಿದ್ದು, ರಾಜಧಾನಿ ಪೂರ್ವ ಇಂಫಾಲ್​​ನಲ್ಲಿ (Imphal) ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಇಂಫಾಲದ ಸಾವೊಂಬಂಗ್ ಪ್ರದೇಶದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು 50 ವರ್ಷ ವಯಸ್ಸಿನ ಮಾರಿಂಗ್ ಎಂಬ ಮಹಿಳೆಯ ಮನೆಗೆ ನುಗ್ಗಿ ಅವರ ಮುಖದ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಕೋರರು ಮಹಿಳೆಯ ಮೇಲೆ ಗುಂಡು ಹಾರಿಸಿದ್ದರ ಜತೆಗೆ, ಘಟನಾ ಸ್ಥಳದಿಂದ ಪಲಾಯನ ಮಾಡುವ ಮೊದಲು ಆಕೆಯ ಮುಖವನ್ನು ವಿರೂಪಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರ ಪೊಲೀಸರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದು, ಗುಂಡಿನ ದಾಳಿ ನಡೆದ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ಸಮೀಪದ ಪ್ರದೇಶಗಳಲ್ಲಿನ ಮನೆಗಳಲ್ಲೂ ಶೋಧ ನಡೆಸಲಾಗುತ್ತಿದೆ. ಘಟನೆ ಸಂಬಂಧ ಪೊಲೀಸರು ಈಗಾಗಲೇ ಸುತ್ತಮುತ್ತಲಿನ ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಮೃತ ಮಹಿಳೆ ನಾಗಾ ಸಮುದಾಯಕ್ಕೆ ಸೇರಿದವರಾಗಿದ್ದು, ಕೆಲವು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಹಿಂಸಾಚಾರದಿಂದಾಗಿ ಸುದೀರ್ಘ ಅವಧಿಗೆ ಮುಚ್ಚಲ್ಪಟ್ಟಿದ್ದ ಶಿಕ್ಷಣ ಸಂಸ್ಥೆಗಳು ಶುಕ್ರವಾರವಷ್ಟೇ ಮರಳಿ ಕಾರ್ಯಾರಂಭ ಮಾಡಿದ್ದವು. ಇದಾದ ನಂತರ ಒಂದು ದಿನದ ಅವಧಿಯಲ್ಲಿ ಪಶ್ಚಿಮ ಇಂಫಾಲ್ ಜಿಲ್ಲೆಯ ಶಾಲೆಯೊಂದರ ಹೊರಗೆ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದರಿಂದ ಮತ್ತೆ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಮೂರು ಸರಕು ಸಾಗಾಣಿಕಾ ಟ್ರಕ್ ಗಳಿಗೆ ಬೆಂಕಿ ಹಚ್ಚಲಾಗಿದೆ.

ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮೇ ತಿಂಗಳಲ್ಲಿ ಹಿಂಸಾಚಾರ ಆರಂಭಗೊಂಡಿತ್ತು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.