ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪ: ಅಶ್ರುವಾಯು ಸಿಡಿಸುತ್ತಾ ಗ್ಯಾಲರಿಯಿಂದ ನುಗ್ಗಿದ ಇಬ್ಬರು, ನಾಲ್ವರು ವಶಕ್ಕೆ
ಲೋಕಸಭೆಯಲ್ಲಿ ಇಂದು ಬುಧವಾರ ಭಾರೀ ಭದ್ರತಾ ಲೋಪವಾಗುವ ಘಟನೆ ನಡೆದಿದ್ದು, ಸಂಸತ್ತಿನ ಮೇಲೆ ದಾಳಿಯ 22 ನೇ ವಾರ್ಷಿಕೋತ್ಸವದಂದು ಇಬ್ಬರು ಒಳನುಸುಳಿ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಸದನದ ಸುತ್ತಲೂ ಓಡಾಡಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ನವದೆಹಲಿ: ಇಬ್ಬರು ಆಗಂತುಕರು ಸಂಸತ್ತಿನ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಸದಸ್ಯರ ಪೀಠಕ್ಕೆ ಜಿಗಿದು ಹಳದಿ ಬಣ್ಣದ ಆಶ್ರುವಾಯು ಸಿಡಿಸುತ್ತಾ ಓಡಾಡಿದ ಘಟನೆ ಬುಧವಾರ ಲೋಕಸಭೆಯಲ್ಲಿ ನಡೆದಿದ್ದು ಭಾರೀ ಭದ್ರತಾ ಲೋಪವುಂಟಾದ ಪ್ರಸಂಗ ನಡೆದಿದೆ.
ಇದರಿಂದ ಗೊಂದಲದ ವಾತಾವರಣ ಉಂಟಾಗಿ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಸಂದರ್ಶಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು ಬೆಂಚುಗಳ ಮೇಲೆ ಘೋಷಣೆ ಕೂಗುತ್ತಾ ಇಬ್ಬರು ಹಾರುತ್ತಿರುವುದು ಕಂಡುಬಂದಿತು.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳುವಂತೆ ಇಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಜಿಗಿದಿದ್ದಾರೆ. ಶೂನ್ಯ ವೇಳೆಯಲ್ಲಿ ಒಬ್ಬರು ಅಶ್ರುವಾಯು ಎರಚುತ್ತಾ ಸಾರ್ವಜನಿಕ ಗ್ಯಾಲರಿಯಿಂದ ಜಿಗಿದರೆ ಮತ್ತೊಬ್ಬ ಲೋಕಸಭೆಯ ಬೆಂಚುಗಳ ಮೇಲೆ ಹಾರುತ್ತಿರುವುದು ಕಂಡುಬಂದಿದೆ ಎಂದು ಚೌಧರಿ ಹೇಳಿದರು.
ಕೂಡಲೇ ಇಬ್ಬರು ವ್ಯಕ್ತಿಗಳನ್ನು ಅಲ್ಲಿದ್ದ ಲೋಕಸಭಾ ಸದಸ್ಯರು ಮತ್ತು ಸಿಬ್ಬಂದಿ ನಿಯಂತ್ರಿಸಲು ಹೋಗಿ ತಳ್ಳಾಟ ನಡೆದಿದೆ. ಲೋಕಸಭಾಧ್ಯಕ್ಷರ ಸ್ಥಾನದಲ್ಲಿದ್ದ ಬಿಜೆಪಿ ಸದಸ್ಯ ರಾಜೇಂದ್ರ ಅಗರವಾಲ್ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
ಇದು ಭದ್ರತಾ ಉಲ್ಲಂಘನೆಯಾಗಿದೆ. ಇಂದು ನಾವು 2001 ರಲ್ಲಿ ನಡೆದ ಸಂಸತ್ತಿನ ದಾಳಿಯ 22ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಅಧೀರ್ ರಂಜನ್ ಚೌಧರಿ ಹೇಳಿದರು.
ನಾಲ್ವರು ಪೊಲೀಸರ ವಶಕ್ಕೆ: ಘಟನೆಗೆ ಸಂಬಂಧಿಸಿದಂತೆ ಸದನದೊಳಗೆ ನುಗ್ಗಿ ದಾಂಧಲೆ ನಡೆಸಿದ ಇಬ್ಬರು ಹಾಗೂ ಹಳದಿ ಬಣ್ಣದ ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳನ್ನು ಹೊತ್ತು ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆ ಸೇರಿ ಮತ್ತೊಬ್ಬ ಯುವಕ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಂಸತ್ತಿನ ಒಳಗೆ ನುಗ್ಗಿದ ಒಬ್ಬಾತನನ್ನು ಸಾಗರ್ ಶರ್ಮಾ ಹಾಗೂ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಇಬ್ಬರಲ್ಲಿ ಒಬ್ಬ ಮಹಿಳೆ ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದ್ದು, ನಾಲ್ವರನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ನಂತರ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ಭಯೋತ್ಪಾದಕರು 2001 ರಲ್ಲಿ ಇದೇ ದಿನ ಸಂಸತ್ತಿನ ಮೇಲೆ ದಾಳಿ ಮಾಡಿ ಒಂಬತ್ತು ಜನರನ್ನು ಕೊಂದು ಹಾಕಿದ್ದರು.
ಲೋಕಸಭಾಧ್ಯಕ್ಷರ ಹೇಳಿಕೆ: ಶೂನ್ಯ ವೇಳೆ ನಡೆದ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ಸಹ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಇದು ಕೇವಲ ಹೊಗೆ ಎಂದು ಕಂಡುಬಂದಿದೆ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


