ದೇಶ

ಮಹಿಳಾ ರೆಸ್ಲರ್'ಗೆ ಲೈಂಗಿಕ ಕಿರುಕುಳ: ಬಿಜೆಪಿ ಸಂಸದನ ವಿರುದ್ಧ ಕ್ರಮಕ್ಕೆ ಆಗ್ರಹ, ತಮ್ಮೊಂದಿಗೆ ಕೈಜೋಡಿಸುವಂತೆ ರಾಜಕೀಯ ಪಕ್ಷಗಳಿಗೆ ಕುಸ್ತಿಪಟುಗಳ ಕರೆ

ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಹಲವಾರು ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಭಾರತದ ಅಗ್ರ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಮ್ಮೊಂದಿಗೆ ಕೈಜೋಡಿಸುವಂತೆ ರಾಜಕೀಯ ಪಕ್ಷಗಳಿಕೆ ಕರೆ ನೀಡಿದ್ದಾರೆ.

ಮಹಿಳಾ ರೆಸ್ಲರ್'ಗೆ ಲೈಂಗಿಕ ಕಿರುಕುಳ: ಬಿಜೆಪಿ ಸಂಸದನ ವಿರುದ್ಧ ಕ್ರಮಕ್ಕೆ ಆಗ್ರಹ, ತಮ್ಮೊಂದಿಗೆ ಕೈಜೋಡಿಸುವಂತೆ ರಾಜಕೀಯ ಪಕ್ಷಗಳಿಗೆ ಕುಸ್ತಿಪಟುಗಳ ಕರೆ
ಪ್ರತಿಭಟನಾನಿರತ ಕುಸ್ತಿಪಟುಗಳು.
Published On :

ನವದೆಹಲಿ: ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಲವಾರು ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಭಾರತದ ಅಗ್ರ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಮ್ಮೊಂದಿಗೆ ಕೈಜೋಡಿಸುವಂತೆ ರಾಜಕೀಯ ಪಕ್ಷಗಳಿಕೆ ಕರೆ ನೀಡಿದ್ದಾರೆ.
 
ಈ ಬಾರಿ ಯಾರನ್ನೂ ತಿರಸ್ಕರಿಸುವುದಿಲ್ಲ. ನಮ್ಮ ಪ್ರತಿಭಟನೆಯನ್ನು ಬೆಂಬಲಿಸಲು ಬಯಸುವವರು ಬಂದು ನಮ್ಮೊಂದಿಗೆ ಕೈಜೋಡಿಸಬಹುದು ಎಂದು ಕುಸ್ತಿಪಟುಗಳು ಹೇಳಿದ್ದಾರೆ.

ಕಳೆದ ಜನವರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕ್ರೀಡಾಪಟುಗಳ ಸಿಪಿಎಂ ನಾಯಕಿ ಬೃಂದಾ ಕಾರಟ್ ಅವರನ್ನು ವೇದಿಕೆಯಿಂದ ಹೊರ ಹೋಗುವಂತೆ ಹೇಳಿದ್ದರು.

ಈ ಬಾರಿ, ಬಿಜೆಪಿ, ಕಾಂಗ್ರೆಸ್, ಎಎಪಿ, ಅಥವಾ ಯಾವುದೇ ಪಕ್ಷವಾಗಲಿ ನಮ್ಮ ಪ್ರತಿಭಟನೆಗೆ ಸೇರಲು ಎಲ್ಲಾ ಪಕ್ಷಗಳಿಗೆ ಸ್ವಾಗತವಿದೆ. ನಾವು ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಅವರು ಹೇಳಿದ್ದಾರೆ.

ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಏಳು ಮಹಿಳಾ ಕುಸ್ತಿಪಟುಗಳು ಸೆಂಟ್ರಲ್ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಕುಸ್ತಿಪಟುಗಳ ಆರೋಪವಾಗಿದೆ.

ಹೀಗಾಗಿ ಕುಸ್ತಿಪಟುಗಳು ಮರಳಿ ಪ್ರತಿಭಟನೆ ಆರಂಭಿಸಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದ್ದಾರೆ. ಆಶ್ವಾಸನೆ ನೀಡಿದ್ದರಿಂದ ನಾವು ಜನವರಿಯಲ್ಲಿ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದ್ದೆವು. ಅದು ಸುಳ್ಳು ಆಶ್ವಾಸನೆಯಾಗಿತ್ತು. ಈ ಬಾರಿ ಕ್ರಮ ಕೈಗೊಳ್ಳದ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಕುಸ್ತಿಪಟು ವಿನೇಶ್ ಫೋಗಟ್ ಅವರು ರಾತ್ರಿ ಇಡೀ ಪಾದಚಾರಿ ಮಾರ್ಗದಲ್ಲಿ ಕಾಲ ಕಳೆದ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

2.5 ತಿಂಗಳ ಹಿಂದೆ ಪ್ರಕರಣ ಸಂಬಂಧ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ನಮಗೆ ಹಲವು ಬಾರಿ ಭರವಸೆಗಳನ್ನು ನೀಡಿದ್ದರು. ಹೀಗಾಗಿ ತಿಂಗಳುಗಟ್ಟಲೆ ಕಾದು ಕುಳಿತಿದ್ದೆವು. ಆದರೆ, ಯಾವುದೇ ಭರವಸೆಗಳನ್ನೂ ಅಧಿಕಾರಿಗಳು ಈಡೇರಿಸಿಲ್ಲ. ಈ ಬಾರಿ ಕ್ರಮ ಕೈಗೊಳ್ಳದ ಹೊರತು ನಾನು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ರಾಜಕೀಯ ಪಕ್ಷದ ಯಾವುದೇ ಬೆಂಬಲವನ್ನು ನಾವು ನಿರಾಕರಿಸುವುದಿಲ್ಲ. ನಮ್ಮದೇ ತಪ್ಪು. ಈ ಹಿಂದೆ ಜನರು ನಮ್ಮನ್ನು ಬೆಂಬಲಿಸಲು ಮುಂದಾದಾಗ ನಾವೇ ನಿರಾಕರಿಸಿದ್ದೆವು. ಈ ಬಾರಿ ಪ್ರತೀಯೊಬ್ಬರನ್ನೂ ಸ್ವಾಗತಿಸುತ್ತೇವೆ. ಯಾವುದೇ ಪಕ್ಷ ಬೇಕಾದರೂ ನಮ್ಮೊಂದಿಗೆ ಕೈಜೋಡಿಸಬಹುದು ಎಂದು ಸಾಕ್ಷಿ ಮಲಿಕ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.