ನೀರಿಗೆ ಬಿದ್ದ ತನ್ನ ಮೊಬೈಲ್ ಹುಡುಕಲು ಡ್ಯಾಮ್ ನಲ್ಲಿನ 41 ಲಕ್ಷ ಲೀಟರ್ ನೀರು ಖಾಲಿ ಮಾಡಿಸಿದ ಅಧಿಕಾರಿ, ಸರ್ಕಾರದಿಂದ ತಕ್ಕ ಪಾಠ!
ಕಳೆದು ಹೋದ ತನ್ನ ದುಬಾರಿ ಫೋನ್ ಹುಡುಕಲು ಅಧಿಕಾರಿಯೋರ್ವ ಜಲಾಶಯದಿಂದ 41 ಲಕ್ಷ ಲೀಟರ್ ನೀರನ್ನು ಪೋಲು ಮಾಡಿರುವ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.

ರಾಯ್ಪುರ: ಕಳೆದು ಹೋದ ತನ್ನ ದುಬಾರಿ ಫೋನ್ ಹುಡುಕಲು ಅಧಿಕಾರಿಯೋರ್ವ ಜಲಾಶಯದಿಂದ 41 ಲಕ್ಷ ಲೀಟರ್ ನೀರನ್ನು ಪೋಲು ಮಾಡಿರುವ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.
ಛತ್ತೀಸ್ಗಢ (Chhattisgarh) ಅಧಿಕಾರಿ ರಾಜೇಶ್ ಬಿಸ್ವಾಸ್ ( Rajesh Biswas) ಎಂಬುವವರು ನೀರಿನಲ್ಲಿ ಬಿದ್ದು ಕಳೆದುಹೋದ ತಮ್ಮ ಮೊಬೈಲ್ ಹುಡುಕಲು ಡ್ಯಾಮ್ ನಲ್ಲಿ ಸಂಗ್ರಹವಾಗಿದ್ದ ಸುಮಾರು 41 ಲಕ್ಷ ಲೀಟರ್ ನೀರನ್ನು ಪಂಪ್ ಗಳ ಮೂಲಕ ಹೊರಗೆ ಹಾಕಿದ್ದಾರೆ.
ಛತ್ತೀಸ್ ಘಡದ ಕೊಯಿಲೀಬೇಡಾದ ಕಂಕೇರ ಜಿಲ್ಲೆಯ ಆಹಾರ ವಿಭಾಗದ ಅಧಿಕಾರಿ ರಾಜೇಶ್ ಬಿಸ್ವಾಸ್ ಈ ದುಷ್ಕೃತ್ಯವೆಸಗಿದ್ದು, ತಮ್ಮ ರೂ. 1 ಲಕ್ಷ ಮೌಲ್ಯದ ಫೋನ್ ಅಕಸ್ಮಾತ್ ಆಗಿ ಜಲಾಶಯದಲ್ಲಿ ಬಿದ್ದ ಪರಿಣಾಮ, ಅದನ್ನು ಮರಳಿ ಪಡೆಯುವ ಪ್ರಯತ್ನವಾಗಿ ಜಲಾಶಯದಲ್ಲಿನ ಬರೊಬ್ಬರಿ 41 ಲಕ್ಷ ಲೀಟರ್ ನೀರನ್ನು ಪೋಲು ಮಾಡಿದ್ದಾರೆ. ಅಧಿಕಾರಿಯ ಈ ಬೇಜಾವಾಬ್ದಾರಿ ತನದಿಂದಾಗಿ ಬೇಸಿಗೆಯ ಈ ದಿನಗಳಲ್ಲಿ ನೀರಿನ ಕೊರತೆ ಉಂಟಾಗಲಿದೆ ಎಂಬ ಆತಂಕ ಸ್ಥಳೀಯರಲ್ಲಿ ನಿರ್ಮಾಣವಾಗಿದೆ.
ಅಧಿಕಾರಿಗಳನ್ನು ಕೇಳಿಯೇ ನೀರು ಬಿಟ್ಟಿದ್ದು: ರಾಜೇಶ್
ಇನ್ನು ಘಟನೆ ಕುರಿತು ಸ್ಪಷ್ಟನೆ ನೀಡಿರುವ ಅಧಿಕಾರಿ ರಾಜೇಶ್ ಬಿಸ್ವಾಸ್, ‘ಹತ್ತಿರದ ನಾಲೆಗೆ ನೀರನ್ನು ಹರಿಬಿಟ್ಟು ನನ್ನ ಫೋನ್ನ್ನು ಹುಡುಕಬೇಕೆಂದುಕೊಂಡಿದ್ದೇನೆ ಎಂದು ಮೌಖಿಕವಾಗಿ ಸ್ಥಳೀಯ ಉಪವಿಭಾಗಾಧಿಕಾರಿಗಳ ಬಳಿ ಕೇಳಿಕೊಂಡೆ. ಆಗ ಅವರು, ಮೂರರಿಂದ ನಾಲ್ಕು ಅಡಿ ನೀರನ್ನು ಜಲಾಶಯದಿಂದ ಹರಿಬಿಟ್ಟರೆ ಸ್ಥಳೀಯ ರೈತರಿಗೂ ಪ್ರಯೋಜನವಾಗಬಹುದು ಆಗಲಿ ಎಂದು ಅನುಮತಿ ನೀಡಿದರು. ನಂತರ ಸ್ಥಳೀಯರ ಸಹಾಯದಿಂದ ಜಲಾಶಯದೊಳಗೆ ಬಿದ್ದ ಮೊಬೈಲ್ ಅನ್ನು ಮರಳಿ ಪಡೆದುಕೊಂಡೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ಜಲಸಂಪನ್ಮೂಲ ಇಲಾಖೆಯ ಉಪವಿಭಾಗಾಧಿಕಾರಿ ಆರ್ಸಿ ಧಿವರ್ ಅವರು ಗರಿಷ್ಠ ಐದು ಅಡಿ ಆಳದವರಗೆ ಮಾತ್ರ ನೀರು ಬಿಡಲು ಮೌಖಿಕ ಅನುಮತಿ ನೀಡಿದ್ದರು ಎಂದು ಹೇಳಲಾಗಿದೆ. ರಾಜೇಶ್ ಬಿಸ್ವಾಸ್ ಅವರ ಈ ನಡೆಯಿಂದ ಈ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಬಹುದೆಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಏಕೆಂದರೆ ಬೇಸಿಗೆಕಾಲದಲ್ಲಿ ಇಲ್ಲಿನ ಜನ ಟ್ಯಾಂಕರ್ಗಳ ಮೇಲೆ ಅವಲಂಬಿತರಾಗಿರುತ್ತಾರೆ. ಆರಂಭದಲ್ಲಿ ಸ್ಥಳೀಯ ನಿವಾಸಿಗಳು ನೀರಿಗೆ ಧುಮುಕಿ ಮೊಬೈಲ್ ಅನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ನೀರಿನಾಳ ಹೆಚ್ಚಿದುದರಿಂದ ಪ್ರಯತ್ನ ವಿಫಲವಾಗಿದೆ. ಆಗ ಈ ಅಧಿಕಾರಿ ತನ್ನ ಫೋನ್ ಅನ್ನು ಮರಳಿ ಪಡೆಯಲೇಬೇಕು ಎಂಬ ಜಿದ್ದಿಗೆ ಬಿದ್ದು ಇಂಥ ಅರ್ಥಹೀನ ಆಲೋಚನೆಯನ್ನು ಕಾರ್ಯಗತಗೊಳಿಸಿದ್ದಾರೆ. ಸತತ ಮೂರು ದಿನಗಳ ಕಾಲ ಎರಡು 30hp ಡೀಸಲ್ ಪಂಪ್ಗಳ ಸಹಾಯದಿಂದ ನೀರುಹರಿಬಿಡುವಿಕೆಯ ಕಾರ್ಯಾಚರಣೆಯನ್ನು ನಡೆಸಲಾಗಿದೆ.
ವಿಷಯ ತಿಳಿದ ನಂತರ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಪಂಪ್ಗಳನ್ನು ಸ್ಥಗಿತಗೊಳಿಸಿದ್ದಾರಾದರೂ 41 ಲಕ್ಷ ಲೀಟರಿಗೂ ಹೆಚ್ಚು ನೀರು ಪೋಲಾಗಿದೆ. ಇಷ್ಟು ಪ್ರಮಾಣ ನೀರನ್ನು 1,500 ಎಕರೆ ಕೃಷಿ ಭೂಮಿಗೆ ಬಳಕೆ ಮಾಡಬಹುದಾಗಿತ್ತು ಎಂದು ತಜ್ಞರು ಹೇಳಿದ್ದಾರೆ.
ಮಾಡಿದ ತಪ್ಪಿಗೆ ತಕ್ಕಪಾಠ
ಇನ್ನು ಬೇಸಿಗೆ ಅವಧಿಯಲ್ಲಿ ನೀರಿನ ಬೃಹತ್ ಪೋಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕೇರ್ ಕಲೆಕ್ಟರ್ ಪ್ರಿಯಾಂಕಾ ಶುಕ್ಲಾ ಅವರು ಶುಕ್ರವಾರ ವಿಶ್ವಾಸ್ ಅವರನ್ನು ಅಮಾನತುಗೊಳಿಸಿದ್ದಾರೆ. ಅಮಾನತು ಆದೇಶದಲ್ಲಿ ವಿಶ್ವಾಸ್ ಅವರು ತಮ್ಮ ಮೊಬೈಲ್ ಫೋನ್ ಅನ್ನು ಹುಡುಕಲು ಅನುಮತಿಯಿಲ್ಲದೆ ಜಲಾಶಯದಿಂದ 41,104 ಕ್ಯೂಬಿಕ್ ಮೀಟರ್ ನೀರನ್ನು ಹರಿಸಿದ್ದಾರೆ ಮತ್ತು ಇದು ಅವರ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


