ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಡಿ ಭಾಗಿ: ಅಧಿಕೃತ ಹೇಳಿಕೆ
ಇದೇ ತಿಂಗಳ 28 ರಂದು ನಡೆಯಲಿರುವ ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಕಾಂಗ್ರೆಸ್, ಎಡಪಕ್ಷ, ಟಿಎಂಸಿ ಸೇರಿದಂತೆ 19 ವಿಪಕ್ಷಗಳು ಬಹಿಷ್ಕರಿಸಿವೆ. ಆದರೆ, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಒಡಿಶಾದ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಪಕ್ಷ ಅಧಿಕೃತವಾಗಿ ಹೇಳಿಕೆ ನೀಡಿದೆ.

ನವದೆಹಲಿ: ಇದೇ ತಿಂಗಳ 28 ರಂದು ನಡೆಯಲಿರುವ ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಕಾಂಗ್ರೆಸ್, ಎಡಪಕ್ಷ, ಟಿಎಂಸಿ ಸೇರಿದಂತೆ 19 ವಿಪಕ್ಷಗಳು ಬಹಿಷ್ಕರಿಸಿವೆ. ಪ್ರಧಾನಿ ಮೋದಿ ನೂತನ ಸಂಸತ್ ಭವನವನ್ನು ಉದ್ಘಾಟನೆ ಮಾಡಲಿದ್ದು, ರಾಷ್ಟ್ರಪತಿಗಳು ಸಂಸತ್ ಭವನ ಉದ್ಘಾಟನೆ ಮಾಡದೇ ಇರುವುದನ್ನು ವಿಪಕ್ಷಗಳು ರಾಷ್ಟ್ರಪತಿಗಳ ಹುದ್ದೆಗೆ ಮಾಡಿದ ಅವಮಾನ ಎಂದು ಆರೋಪಿಸಿವೆ.
ಇದನ್ನೂ ಓದಿ: ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸುತ್ತಿರುವುದೇಕೆ?: 19 ವಿಪಕ್ಷಗಳು ನೀಡಿರುವ ವಿವರಣೆ ಹೀಗಿದೆ...
ಆದರೆ, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಒಡಿಶಾದ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಪಕ್ಷ ಅಧಿಕೃತವಾಗಿ ಹೇಳಿಕೆ ನೀಡಿದೆ. ಈ ಸಾಂವಿಧಾನಿಕ ಸಂಸ್ಥೆಗಳು ( ರಾಷ್ಟ್ರಪತಿ ಮತ್ತು ಸಂಸತ್) ತಮ್ಮ ಪಾವಿತ್ರ್ಯತೆ ಮತ್ತು ಗೌರವದ ಮೇಲೆ ಪರಿಣಾಮ ಬೀರುವ ಯಾವುದೇ ವಿಷಯಕ್ಕಿಂತ ದೊಡ್ಡದಾಗಿವೆ ಎಂದು ಬಿಜೆಡಿ ನಂಬುತ್ತದೆ. ಅಂತಹ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬಹುದು. ಆದ್ದರಿಂದ ನೂತನ ಸಂಸತ್ ಉದ್ಘಾಟನೆಯ ಮಹತ್ವದ ಸಂದರ್ಭದಲ್ಲಿ ಭಾಗವಹಿಸುವುದಾಗಿ ಪಕ್ಷದ ರಾಷ್ಟ್ರೀಯ ವಕ್ತಾರ ಡಾ. ಎಸ್. ಪಾತ್ರಾ ಪತ್ರದ ಮೂಲಕ ತಿಳಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಮಹತ್ವದ ಅಂಶವೆಂದರೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರು ಇಡುವ ನಿಟ್ಟಿನಲ್ಲಿ ವಿಪಕ್ಷಗಳ ಮೈತ್ರಿಕೂಟ ರಚನೆಗೆ ಪ್ರಯತ್ನಿಸುತ್ತಿರುವ ಪಕ್ಷಗಳೆಲ್ಲಾ ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಿವೆ.
ಬಿಜೆಡಿ ಪಕ್ಷವನ್ನು ಈ ಕೂಟಕ್ಕೆ ಸೆಳೆಯುವ ನಿಟ್ಟಿನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ ಮಾತುಕತೆ ಕೂಡಾ ನಡೆಸಿದ್ದರು. ಆದರೆ, ನವೀನ್ ಪಟ್ನಾಯಕ್ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈಗ ಸಂಸತ್ ನೂತನ ಭವನ ಉದ್ಘಾಟನೆ ವಿಷಯದಲ್ಲೂ ಅವರು ಬಿಜೆಪಿ ಬೆಂಬಲಿಸುವ ಮೂಲಕ ವಿಪಕ್ಷಗಳ ಮೈತ್ರಿಕೂಟ ರಚನೆಯಿಂದ ದೂರ ಉಳಿಯುವ ಸುಳಿವು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


