ಧೈರ್ಯವಿದ್ದರೆ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಲಿ: ಉದ್ಧವ್ ಠಾಕ್ರೆ
ಧೈರ್ಯವಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲಿ ಎಂದು ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಭಾನುವಾರ ಸವಾಲು ಹಾಕಿದ್ದಾರೆ.

ಮುಂಬೈ: ಧೈರ್ಯವಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲಿ ಎಂದು ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಭಾನುವಾರ ಸವಾಲು ಹಾಕಿದ್ದಾರೆ.
ಜೂನ್ 19 ರ ಪಕ್ಷದ ಸಂಸ್ಥಾಪನಾ ದಿನಾಚರಣೆಗೂ ಮುಂಚಿತವಾಗಿ ಮುಂಬೈನಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿರುವ ಠಾಕ್ರೆಯವರು, ನಮ್ಮ ಮಣಿಪುರ ಹೊತ್ತಿ ಉರಿಯುತ್ತಿದೆ. ಆದರೆ, ನಮ್ಮ ಪ್ರಧಾನಮಂತ್ರಿಗಳು ಉಪನ್ಯಾಸ ನೀಡಲು ಅಮೆರಿಗಾಗೆ ಭೇಟಿ ನೀಡುತ್ತಿದ್ದಾರೆ. ಅಮಿತ್ ಶಾ ಗೃಹ ಸಚಿವರಾಗಿಯೂ ವಿಫಲರಾಗಿದ್ದಾರೆ. ಅವರಿಗೆ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸಾಧ್ಯವಾಗಲಿಲ್ಲ. ಇಡಿ ಮತ್ತು ಸಿಬಿಐ ಅಧಿಕಾರಿಗಳ ತಂಡವನ್ನಾದರೂ ಕಳುಹಿಸಲಿ, ಅವರಿಂದಾದರೂ ಏನಾದರೂ ಸಹಾಯವಾಗುತ್ತದೆಯೇ ನೋಡೋಣ ಎಂದು ವ್ಯಂಗ್ಯವಾಡಿದ್ದಾರೆ.
ಮಣಿಪುರದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಹಿಂಸಾಚಾರ ಭುಗಿಲೆದ್ದಿದೆ. ಮೈತೇಯಿ ಮತ್ತು ಕುಕಿ ಸಮುದಾಯದ ಜನರ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧವನ್ನು ಪ್ರಧಾನಿ ಮೋದಿ ನಿಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ. ಹಾಗಿದ್ದರೆ, ಮೋದಿ ಅವರು ಮಣಿಪುರದಲ್ಲಿ ಹಿಂಸಾಚಾರವನ್ನು ನಿಲ್ಲಿಸಬೇಕು, ಶಾಂತಿಯನ್ನು ಪುನಃಸ್ಥಾಪಿಸಬೇಕು. ಹಾಗೆ ಮಾಡಿದ್ದೇ ಆದರೆ, ಈ ರಷ್ಯಾ-ಉಕ್ರೇನ್ ಕುರಿತು ಹೇಳುತ್ತಿರುವ ಮಾತುಗಳನ್ನೂ ನಾವು ನಂಬುತ್ತೇವೆಂದು ಹೇಳಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧವೂ ಕಿಡಿಕಾರಿದ ಅವರು, ಜೂನ್ 20 ರಂದು 'ವಿಶ್ವ ದ್ರೋಹಿಗಳ ದಿನ' ಎಂದು ಆಚರಿಸಲಾಗುವುದು. ಅವರು ಮಾಡಿದ "ದ್ರೋಹ" ವನ್ನು ಎಂದಿಗೂ ಮರೆಯಲಾಗದು ಎಂದು ಹೇಳಿದರು.
ಇಂದು ನನ್ನ ಜೊತೆ ನನ್ನ ಪಕ್ಷದ ಯೋಧರಿಲ್ಲ. ಅವರೆಲ್ಲರೂ ನಿಷ್ಠಾವಂತರು ಹಾಗೂ ಬದ್ಧತೆಯುಳ್ಳವರಾಗಿದ್ದರು. ದೇಶದ್ರೋಹಿಗಳಿರುವ ದೊಡ್ಡ ಸೈನ್ಯವನ್ನು ಇಟ್ಟುಕೊಳ್ಳುವುದಕ್ಕಿಂತ ನಿಷ್ಠಾವಂತ ಸೈನಿಕರನ್ನು ಮುನ್ನಡೆಸುವುದು ಉತ್ತಮ. ಯುದ್ಧವು ನಿಷ್ಠೆ ಮತ್ತು ಬದ್ಧತೆಯ ಆಧಾರದ ಮೇಲೆ ಹೋರಾಡಲ್ಪಡುತ್ತದೆ ಎಂದು ತಿಳಿಸಿದರು.
ಏಕನಾಥ್ ಶಿಂಧೆ ಮತ್ತು 39 ಇತರ ಪಕ್ಷದ ಶಾಸಕರು ಆಗಿನ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಮಹಾ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ನಂತರ ಕಳೆದ ವರ್ಷ ಜೂನ್‌ನಲ್ಲಿ ಶಿವಸೇನೆ ವಿಭಜನೆಯಾಯಿತು.
ನಿಜವಾದ ಶಿವಸೇನೆ ನಮ್ಮದು. ನೀವು ಸಂಸದರು ಮತ್ತು ಶಾಸಕರನ್ನು ಕದ್ದಿರಬಹುದು. ಆದರೆ, ವಿಶ್ವಾಸಾರ್ಹ ಮತ್ತು ನಿಷ್ಠಾವಂತ ಬೆಂಬಲಿಗರನ್ನಲ್ಲ. ಶಿವಸೇನೆಯು ಆಡಳಿತವನ್ನು ಸಮರ್ಥವಾಗಿ ನಡೆಸಬಲ್ಲದು ಎಂದು ಜನರಿಗೆ ತೋರಿಸಿದೆ. ನಾನು ಮುಖ್ಯಮಂತ್ರಿ ಸ್ಥಾನವನ್ನು ಸವಾಲಾಗಿ ತೆಗೆದುಕೊಂಡಿದ್ದೇನೆ. ಇಂದು ನಾನು ನನ್ನವರನ್ನು ಭೇಟಿಯಾದಾಗ ಅವರು ನನ್ನನ್ನು ಪರಿಗಣಿಸುತ್ತಾರೆ. ನನ್ನನ್ನು ಅವರು ಕುಟುಂಬ ಸದಸ್ಯರೆಂದು ನೋಡುತ್ತಾರೆಂದು ತಿಳಿಸಿದರು.
ಇದೇ ವೇಳೆ ಮೋದಿ ಎಂದರೆ ಭಾರತ ಎಂಬ ಶಿಂಧೆ ಹೇಳಿಕೆಯನ್ನು ಟೀಕಿಸಿದ ಅವರು, ರಾಷ್ಟ್ರಕ್ಕಿಂತ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಬಿಜೆಪಿ ಹಿಟ್ಲರ್ ಹಾದಿಯಲ್ಲಿ ಸಾಗುತ್ತಿದೆ. ಆದರೆ, ಕ್ರಾಂತಿಕಾರಿಗಳಿಂದ ಸ್ಫೂರ್ತಿ ಪಡೆಯುವುದು ನಮ್ಮ ಕೆಲಸವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


