ದೇಶ

ಮಣಿಪುರ ಹಿಂಸಾಚಾರ: 30 ಮನೆಗಳಿಗೆ, ಭದ್ರತಾ ಪಡೆಗಳು ಬಳಸುತ್ತಿದ್ದ ಬಸ್ಸುಗಳಿಗೆ ದುಷ್ಕರ್ಮಿಗಳಿಂದ ಬೆಂಕಿ

ಗಲಭೆ ಪೀಡಿತ ಮಣಿಪುರದಲ್ಲಿ ಹೊಸ ಹಿಂಸಾಚಾರ ಪ್ರಕರಣ ವರದಿಯಾಗಿದ್ದು, ಸುಮಾರು 2,000 ಮಂದಿಯಿದ್ದ ಜನರ ಗುಂಪೊಂದು ಬುಧವಾರ ಬೆಳಿಗ್ಗೆ ಭಾರತ-ಮ್ಯಾನ್ಮಾರ್ ಗಡಿ ಪಟ್ಟಣವಾದ ಮೊರೆಹ್‌ನಲ್ಲಿ ಸುಮಾರು 30 ಮನೆಗಳನ್ನು ಸುಟ್ಟುಹಾಕಿದೆ ಮತ್ತು ಇತರ ನಾಲ್ಕು ಮನೆಗಳನ್ನು ಕೆಡವಿದೆ.

ಮಣಿಪುರ ಹಿಂಸಾಚಾರ: 30 ಮನೆಗಳಿಗೆ, ಭದ್ರತಾ ಪಡೆಗಳು ಬಳಸುತ್ತಿದ್ದ ಬಸ್ಸುಗಳಿಗೆ ದುಷ್ಕರ್ಮಿಗಳಿಂದ ಬೆಂಕಿ
ಮಣಿಪುರದ ಸೂಕ್ಷ್ಮ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿ.
Published On :

ಇಂಫಾಲ: ಗಲಭೆ ಪೀಡಿತ ಮಣಿಪುರದಲ್ಲಿ ಹೊಸ ಹಿಂಸಾಚಾರ ಪ್ರಕರಣ ವರದಿಯಾಗಿದ್ದು, ಸುಮಾರು 2,000 ಮಂದಿಯಿದ್ದ ಜನರ ಗುಂಪೊಂದು ಬುಧವಾರ ಬೆಳಿಗ್ಗೆ ಭಾರತ-ಮ್ಯಾನ್ಮಾರ್ ಗಡಿ ಪಟ್ಟಣವಾದ ಮೊರೆಹ್‌ನಲ್ಲಿ ಸುಮಾರು 30 ಮನೆಗಳನ್ನು ಸುಟ್ಟುಹಾಕಿದೆ ಮತ್ತು ಇತರ ನಾಲ್ಕು ಮನೆಗಳನ್ನು ಕೆಡವಿದೆ.

ಬಹಳಷ್ಟು ಮಹಿಳೆಯರೇ ಇದ್ದ ಗುಂಪು ಬೆಳಗ್ಗೆ 10 ಗಂಟೆ ಸುಮಾರಿಗೆ ಮೊರೆಹ್ ಬಜಾರ್ ಪ್ರದೇಶದಲ್ಲಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಈ ವೇಳೆ ಭದ್ರತಾ ಸಿಬ್ಬಂದಿ ಸ್ಥಳದಲ್ಲಿದ್ದರು. ಆದರೆ, ಅವರು ಮೂಕ ಪ್ರೇಕ್ಷಕರಾಗಿದ್ದರು. ಮೇ 3 ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಸ್ಥಳವನ್ನು ತೊರೆದ ಮೇಟಿ ಸಮುದಾಯಕ್ಕೆ ಸೇರಿದ ಮನೆಗಳು ಇವಾಗಿವೆ. 

ಮೊರೆಹ್ ವಿವಿಧ ಸಮುದಾಯಗಳ ಜನಸಂಖ್ಯೆಯನ್ನು ಹೊಂದಿದ್ದು, ಕುಕಿಗಳು, ಮೇಟಿಗಳು, ತಮಿಳರು, ಗೂರ್ಖಾಗಳು, ಬೆಂಗಾಲಿಗಳು, ಪಂಜಾಬಿ ಸೇರಿದಂತೆ ಇತರೆ ಸಮುದಾಯಗಳು ವಾಸವಾಗಿವೆ.

ಇಲ್ಲಿನ ಆದಿವಾಸಿಗಳಲ್ಲದವರು ಹೆಚ್ಚಾಗಿ ವ್ಯಾಪಾರಿಗಳಾಗಿದ್ದು, ಅವರು ಹೆಚ್ಚಾಗಿ ಮ್ಯಾನ್ಮಾರ್‌ನ ಗ್ರಾಹಕರನ್ನು ಅವಲಂಬಿಸಿದ್ದಾರೆ. ಆದಾಗ್ಯೂ, ಈಗ ಅವರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ವ್ಯಾಪಾರದ ಮೇಲೆ ತೀವ್ರ ಹೊಡೆತ ಬಿದ್ದಿದೆ.

ಬಿಷ್ಣುಪುರ್-ಚುರಚಂದ್‌ಪುರ ಜಿಲ್ಲೆಗಳ ಗಡಿಗೆ ಸಮೀಪವಿರುವ ಸ್ಥಳದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ರೈತರು ಗಾಯಗೊಂಡ ಒಂದು ದಿನದ ನಂತರ ಈ ಘಟನೆ ನಡೆದಿದೆ.

ಇನ್ನೊಂದೆಡೆ, ಸಿಬ್ಬಂದಿಯನ್ನು ಸಾಗಿಸಲು ಭದ್ರತಾ ಪಡೆಗಳು ಬಳಸುತ್ತಿದ್ದ ಎರಡು ಬಸ್‌ಗಳಿಗೆ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಜನರ ಗುಂಪೊಂದು ಬೆಂಕಿ ಹಚ್ಚಿದ ಗಂಟೆಗಳ ನಂತರ ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಎರಡೂ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಂಗಳವಾರ ಸಂಜೆ ದಿಮಾಪುರದಿಂದ ಬಸ್ಸುಗಳು ಬರುತ್ತಿದ್ದಾಗ ಸಪೋರ್ಮಿನಾದಲ್ಲಿ ಈ ಘಟನೆ ಸಂಭವಿಸಿದೆ.

ಮಣಿಪುರ ನೋಂದಣಿ ಸಂಖ್ಯೆಗಳನ್ನು ಹೊಂದಿರುವ ಬಸ್‌ಗಳನ್ನು ಸಪೋರ್ಮಿನಾದಲ್ಲಿ ನಿಲ್ಲಿಸಿದ ಸ್ಥಳೀಯರು, ಯಾವುದೇ ಸಮುದಾಯದ ಸದಸ್ಯರು ಬಸ್ಸಿನಲ್ಲಿದ್ದರೆ ಅದನ್ನು ಪರಿಶೀಲಿಸುವುದಾಗಿ ಒತ್ತಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಕೆಲವರು ಬಸ್‌ಗಳಿಗೆ ಬೆಂಕಿ ಹಚ್ಚಿದರು.

ಸುಮಾರು ಮೂರು ತಿಂಗಳ ಹಿಂದೆ ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು. ಅಂದಿನಿಂದ 160ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.