ದೇಶ

ಭಾರತದ ನೆಲ ಚೀನಾ ಕಬಳಿಸಿರುವ ಸತ್ಯವನ್ನು ನಿರಾಕರಿಸುತ್ತಿರುವ ಕೇಂದ್ರದ ಧೋರಣೆ ಅಪಾಯಕಾರಿ: ರಾಹುಲ್‌ ಗಾಂಧಿ

ಲಡಾಖ್‌ನಲ್ಲಿ ಸುಮಾರು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವು, ಚೀನಾದ ವಶದಲ್ಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹಲ್‌ ಗಾಂಧಿ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಅಪಾಯಕಾರಿ ಎಂದು ರಾಹುಲ್‌ ಗುಡುಗಿದ್ದಾರೆ.

ಭಾರತದ ನೆಲ ಚೀನಾ ಕಬಳಿಸಿರುವ ಸತ್ಯವನ್ನು ನಿರಾಕರಿಸುತ್ತಿರುವ ಕೇಂದ್ರದ ಧೋರಣೆ ಅಪಾಯಕಾರಿ: ರಾಹುಲ್‌ ಗಾಂಧಿ
ರಾಹುಲ್ ಗಾಂಧಿ
Published On :

ನವದೆಹಲಿ: ಲಡಾಖ್‌ನಲ್ಲಿ ಸುಮಾರು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವು, ಚೀನಾದ ವಶದಲ್ಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹಲ್‌ ಗಾಂಧಿ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ  ಧೋರಣೆ ಅಪಾಯಕಾರಿ ಎಂದು ರಾಹುಲ್‌ ಗುಡುಗಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, "ಚೀನೀಯರು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಅತ್ಯಂತ ಅಪಾಯಕಾರಿ. ಇನ್ನೂ ಹೆಚ್ಚು ಆಕ್ರಮಣಕಾರಿ ಯೋಜನೆಗಳನ್ನು ರೂಪಿಸಲು ಚೀನಿಯರನ್ನು ಪ್ರೇರೇಪಿಸುತ್ತದೆ ಎಂದು ಎಚ್ಚರಿಕೆ ನೀಡಿದರು.

ಚೀನಿಯರೊಂದಿಗೆ ವ್ಯವಹರಿಸುವ ಮಾರ್ಗವೆಂದರೆ ಅವರೊಂದಿಗೆ ದೃಢವಾಗಿ ವ್ಯವಹರಿಸುವುದು ಮತ್ತು ಅವರು ನಮ್ಮ ನೆಲವನ್ನು ಕಬಳಿಸಿರುವುದನ್ನು ನಾವು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಬೇಕು ಎಂದು ರಾಹುಲ್‌ ಗಾಂಧಿ ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಲಡಾಖ್‌ನ ಗಲ್ವಾನ್‌ನಲ್ಲಿ 2021ರಲ್ಲಿ ಭಾರತ-ಚೀನಾ ಯೋಧರ ನಡುವೆ ಘರ್ಷಣೆ ಸಂಭವಿಸಿತು. ಇದಾದ ಬಳಿಕ ಚೀನಿಯರು ಸುಮಾರು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಕಬಳಿಸಿದರು. ಆದರೆ ಕೇಂದ್ರ ಸರ್ಕಾರ ಒಂದಿಂಚು ಭೂಮಿಯನ್ನೂ ನಾವು ಕಳೆದುಕೊಂಡಿಲ್ಲ ಎಂದು ಹೇಳುತ್ತಿರುವುದು ದೇಶಕ್ಕೆ ಮಾಡುವ ದ್ರೋಹ ಎಂದು ರಾಹುಲ್‌ ಗಾಂಧಿ ಕಿಡಿಕಾರಿದರು.

"ನಾನು ಇತ್ತೀಚೆಗೆ ಕೆಲವು ಮಾಜಿ ಸೈನಿಕರನ್ನು ಭೇಟಿ ಮಾಡಿದ್ದೇನೆ. ಭಾರತೀಯ ಭೂಪ್ರದೇಶವನ್ನು ಚೀನೀಯರು ವಶಪಡಿಸಿಕೊಂಡಿರುವುದನ್ನು ಈ ಮಾಜಿ ಸೈನಿಕರ ನಿಯೋಗ ದೃಢಪಡಿಸಿದೆ. ಅಲ್ಲದೇ ಭಾರತೀಯ ಸೇನೆಯ ಹಲವು ಗಸ್ತು ಕೇಂದ್ರಗಳನ್ನೂ ಚೀನಿ ಸೈನಿಕರು ವಶಪಡಿಸಿಕೊಂಡಿರುವುದನ್ನು ಮಾಜಿ ಸೈನಿಕರ ನಿಯೋಗ ನನಗೆ ತಿಳಿಸಿದೆ ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದರು.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿಯೂ ಸಹ, ರಾಹುಲ್ ಗಾಂಧಿ ಈ ವಿಷಯದ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ಚೀನೀಯರು ನಮಗೆ ಏನು ಹೇಳುತ್ತಿದ್ದಾರೆ ಎಂದರೆ, ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ, ಏಕೆಂದರೆ ನಾವು ನಿಮ್ಮ ಭೌಗೋಳಿಕತೆಯನ್ನು ಬದಲಾಯಿಸುತ್ತೇವೆ. ನಾವು ಲಡಾಕ್ ಅನ್ನು ಪ್ರವೇಶಿಸುತ್ತೇವೆ, ನಾವು ಅರುಣಾಚಲ (ಪ್ರದೇಶ) ಪ್ರವೇಶಿಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ ಎಂಬ ಬಗ್ಗೆ ರಾಹುಲ್ ಗಾಂಧಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.