ತಮಿಳುನಾಡು: ರಾಜ್ಯಪಾಲರ ಭಾಷಣಕ್ಕೆ ಸ್ಟಾಲಿನ್ ಆಕ್ಷೇಪ, ಸದನದಿಂದ ಹೊರ ನಡೆದ ಗವರ್ನರ್ ಆರ್ ಎನ್ ರವಿ!
ತಮಿಳುನಾಡು ವಿಧಾನಸಭಾ ಅಧಿವೇಶನದ ಮೊದಲ ದಿನವಾದ ಇಂದು ರಾಜ್ಯಪಾಲ ಆರ್ ಎನ್ ರವಿ ಭಾಷಣದ ನಂತರ ಗದ್ದಲ, ಕೋಲಾಹಲ ಉಂಟಾಯಿತು.

ಚೆನ್ನೈ: ತಮಿಳುನಾಡು ವಿಧಾನಸಭಾ ಅಧಿವೇಶನದ ಮೊದಲ ದಿನವಾದ ಇಂದು ರಾಜ್ಯಪಾಲ ಆರ್ ಎನ್ ರವಿ ಭಾಷಣದ ನಂತರ ಗದ್ದಲ, ಕೋಲಾಹಲ ಉಂಟಾಯಿತು. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರ ಕಡತಕ್ಕೆ ತೆಗೆದುಕೊಳ್ಳಬೇಕು, ರಾಜ್ಯಪಾಲರು ಸೇರಿಸಿರುವ ಉಳಿದ ಭಾಷಣವನ್ನು ತೆಗೆದುಹಾಕಬೇಕೆಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸ್ಪೀಕರ್ ಗೆ ಹೇಳಿದ ನಂತರ ಗವರ್ನರ್ ಆರ್ ಎನ್ ರವಿ ಸದನದಿಂದ ಹೊರ ನಡೆದರು.
ರಾಜ್ಯ ಸರ್ಕಾರ ಸಿದ್ದಪಡಿಸಿದ ರಾಜ್ಯಪಾಲರ ಮೂಲ ಭಾಷಣವನ್ನು ಮಾತ್ರ ಕಡತಕ್ಕೆ ಸೇರಿಸುವಂತೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ರಾಜ್ಯಪಾಲರ ಭಾಷಣಕ್ಕೆ ಎಂಕೆ ಸ್ಟಾಲಿನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗವರ್ನರ್ ಸದನದಿಂದ ನಿರ್ಗಮಿಸಿದರು.
ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಜಾತ್ಯತೀತತೆ, ಪೆರಿಯಾರ್, ಬಿಆರ್ ಅಂಬೇಡ್ಕರ್, ಕೆ. ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೆ, ರಾಜ್ಯಪಾಲರು ಅವರ ಹೆಸರನ್ನು ತಮ್ಮ ಭಾಷಣದಲ್ಲಿ ಹೇಳಿರಲಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನಿರ್ಣಯ ಮಂಡಿಸಿದರು. ರಾಜ್ಯಪಾಲರ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ನಿರ್ಣಯದಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ.
ಈ ಮಧ್ಯೆ, ತಮಿಳುನಾಡು ಹೆಸರು ಸರಿಯಾಗಿಲ್ಲ ಎಂಬ ರಾಜ್ಯಪಾಲರ ಹೇಳಿಕೆ ಬಗ್ಗೆಯೂ ಕಿಡಿಕಾರಿದ ಡಿಎಂಕೆ ಶಾಸಕರು, ಬಿಜೆಪಿ, ಆರ್ ಎಸ್ ಎಸ್ ಸಿದ್ದಾಂತಗಳನ್ನು ಹೇರಬೇಡಿ. ಇದು ನಾಗಲ್ಯಾಂಡ್ ಇಲ್ಲ, ಹೆಮ್ಮೆಯ ತಮಿಳುನಾಡು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


