ದೇಶದಲ್ಲೇ ಮೊದಲು: ಸಮುದ್ರದಡಿ ಮುಂಬೈ- ಅಹ್ಮದಾಬಾದ್ ಬುಲೆಟ್ ರೈಲು ನಿಲ್ದಾಣ!
ದಿರ್ಘಾವಧಿ ಕಾಯುವಿಕೆ ನಂತರ, ಮುಂಬೈ-ಅಹ್ಮದಾಬಾದ್ ನಡುವಿನ ಭಾರತದ ಬಹುನಿರೀಕ್ಷಿತ ಹೈಸ್ಪೀಡ್ ರೈಲು (ಬುಲೆಟ್ ರೈಲು ಯೋಜನೆ ಕಾಮಗಾರಿ ಆರಂಭವಾಗಿದೆ.

ಮುಂಬೈ: ದಿರ್ಘಾವಧಿ ಕಾಯುವಿಕೆ ನಂತರ, ಮುಂಬೈ-ಅಹ್ಮದಾಬಾದ್ ನಡುವಿನ ಭಾರತದ ಬಹುನಿರೀಕ್ಷಿತ ಹೈಸ್ಪೀಡ್ ರೈಲು (ಬುಲೆಟ್ ರೈಲು ಯೋಜನೆ ಕಾಮಗಾರಿ ಆರಂಭವಾಗಿದೆ.
ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್ ರೈಲ್ ಕಾರಿಡಾರ್ ನ ಭಾಗವಾಗಿ ಮಹಾರಾಷ್ಟ್ರದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಹಾಗೂ ಶಿಲ್ಪಾತ ನಡುವಿನ ಡಬಲ್ ಲೈನ್ ಗಾಗಿ ಟನಲ್ ನಿರ್ಮಾಣ ಕಾಮಗಾರಿಗೆ ಫೆ.10 ರಂದು ಚಾಲನೆ ದೊರೆತಿದೆ.
ಒಟ್ಟು 508.17 ಕಿ.ಮೀ ನ ರೈಲು ಮಾರ್ಗದ ಪೈಕಿ 21 ಕಿ.ಮೀ ಟ್ರ್ಯಾಕ್ ನೆಲದಡಿಯಲ್ಲಿ (underground) ನಲ್ಲಿ ನಿರ್ಮಾಣ ವಾಗಲಿದ್ದು, ನೆಲದಡಿಯಲ್ಲಿ ನಿರ್ಮಾಣವಾಗುತ್ತಿರುವ ಏಕೈಕ ರೈಲು ಮಾರ್ಗ ಇದಾಗಿದ್ದು ಉಳಿದ ಮಾರ್ಗ ಎತ್ತರದಲ್ಲಿ ಹಾದುಹೋಗಲಿದೆ.
ಈ ಟನಲ್ ನಿರ್ಮಾಣವಾಗುವ ಸುತ್ತಮುತ್ತಲ ಪ್ರದೇಶ (ಥಾಣೆ ಕ್ರೀಕ್, ಅಥವಾ ಥಾಣೆ ತೊರೆ)ಯಲ್ಲಿ ಪಕ್ಷಿಧಾಮ ಹಾಗೂ ಮ್ಯಾಂಗ್ರೋವ್ಸ್ ಇರುವುದರಿಂದ ಅವುಗಳ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲಾಗುತ್ತಿದೆ. ನೆಲದಡಿಯಲ್ಲಿ ನಿರ್ಮಾಣವಾಗುತ್ತಿರುವ ರೈಲು ಮಾರ್ಗಕ್ಕೆ ನೈಸರ್ಗಿಕ ಬೆಳಕನ್ನು ಒದಗಿಸುವ ದೃಷ್ಟಿಯಿಂದ ಸ್ಕೈಲೈಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಈ ಯೋಜನೆಯನ್ನು ಸಾಕಾರಗೊಳಿಸುತ್ತಿರುವ ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಯೋಜನೆಯ ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ, ಅದು ಸಮುದ್ರದ ಒಳಭಾಗದಲ್ಲಿ ಹಾದುಹೋಗಲಿರುವ ಟನಲ್ ಗಳು. ಈ ರೀತಿಯ 7 ಟನಲ್ ಗಳು ಬುಲೆಟ್ ರೈಲುಗಳ ಭಾಗವಾಗಿರಲಿದ್ದು, ಟನಲ್ ಬೋರಿಂಗ್ ಯಂತ್ರ (ಟಿಬಿಎಂ) ಹಾಗೂ ನ್ಯೂ ಆಸ್ಟ್ರಿಯನ್ ಟನಲಿಂಗ್ ವಿಧಾನವನ್ನು ಬಳಸಿ ಬಿಕೆಸಿ ಹಾಗೂ ಶಿಲ್ಪಾತ ನಡುವೆ ನಿರ್ಮಾಣವಾಗಲಿದೆ.
ಈ 7 ಕಿ.ಮೀ ನ ಸಮುದ್ರದ ಸುರಂಗ ದೇಶದಲ್ಲೇ ಮೊದಲ ಸಮುದ್ರದ ಸುರಂಗವಾಗಿರಲಿದೆ ಎಂದು ರೈಲ್ವೆ ಮಾಹಿತಿ ನೀಡಿದೆ.
ಈ ಟನಲ್ ಭೂಮಿಯ ಮಟ್ಟದಿಂದ 25-65 ಮೀಟರ್ ನಷ್ಟು ಆಳವಾಗಿರಲಿದ್ದು, ಶಿಲ್ಪಾತದ ಬಳಿ ಪಾರ್ಸಿಕ್ ಹಿಲ್ ನಲ್ಲಿ 114 ಮೀಟರ್ ಕೆಳಭಾಗದಲ್ಲಿ ನಿರ್ಮಾಣವಾಗುತ್ತಿರುವ ಟನಲ್ ಅತ್ಯಂತ ಆಳವಾದ ಟನಲ್ ಆಗಿರಲಿದೆ. ಟನಲ್ ನಿರ್ಮಾಣಕ್ಕೆ ಭಾರತ ಅತ್ಯಾಧುನಿಕ, ನ್ಯೂ ಆಸ್ಟ್ರಿಯನ್ ಸುರಂಗ ವಿಧಾನವನ್ನು ಅನುಸರಿಸುತ್ತಿದೆ.
2022 ರ ಸೆಪ್ಟೆಂಬರ್ 23 ರಂದು ಇದಕ್ಕಾಗಿ ಟೆಂಡರ್ ಕರೆಯಲಾಗಿತ್ತು ಹಾಗೂ ಈ ಯೋಜನೆಗಾಗಿ ಶೇ.98.79 ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಯೋಜನೆಯ ಮೇಲೆ ನಿಗಾ ವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


