ಗುಹೆಗಳಲ್ಲಿ ಉಗ್ರರ ಅಡಗುದಾಣ ಪತ್ತೆ: ಭಾರತೀಯ ಯೋಧರಿಗೆ ಹೊಸ ಸವಾಲು; ಗುಹೆಗಳ ನಾಶಕ್ಕೆ ಸೇನೆಗೆ ಸೂಚನೆ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ನೈಸರ್ಗಿಕ ಗುಹೆಗಳಲ್ಲಿ ಉಗ್ರರ ಅಡಗುದಾಣ ಪತ್ತೆಯಾದ ಹಿನ್ನಲೆಯಲ್ಲಿ ಗುಹೆಗಳನ್ನು ನಾಶಪಡಿಸಲು ಸೇನೆಗೆ ಸೂಚನೆ ನೀಡಲಾಗಿದೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ನೈಸರ್ಗಿಕ ಗುಹೆಗಳಲ್ಲಿ ಉಗ್ರರ ಅಡಗುದಾಣ ಪತ್ತೆಯಾದ ಹಿನ್ನಲೆಯಲ್ಲಿ ಗುಹೆಗಳನ್ನು ನಾಶಪಡಿಸಲು ಸೇನೆಗೆ ಸೂಚನೆ ನೀಡಲಾಗಿದೆ.
ಕಣಿವೆರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಮುಂದುವರೆದಿರುವಂತೆಯೇ ಭಾರತೀಯ ಸೈನಿಕರಿಗೆ ಹೊಸ ಹೊಸ ಸವಾಲುಗಳು ಎದುರಾಗುತ್ತಿದ್ದು, ಪೂಂಛ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಹಳ್ಳತಿಟ್ಟುಗಳ ಭೂಪ್ರದೇಶದಲ್ಲಿ ಸಹಜವಾಗಿರುವ ಗುಹೆಗಳು ಭದ್ರತಾಪಡೆಗಳಿಗೆ ಹೊಸ ಸವಾಲಾಗಿ ಪರಿಣಮಿಸಿವೆ. ಉಗ್ರರ ಅಡಗುತಾಣಗಳಾಗಿರುವ ಇವುಗಳನ್ನು ಶೀಘ್ರ ನಾಶಪಡಿಸುವಂತೆ ಸೇನೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಕಮಾಂಡರ್‌ಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಇಂಡಿಯಾಟಿವಿ ವರದಿ ಮಾಡಿದ್ದು, ಸೋಮವಾರ ಗಡಿಯ ಅವಳಿ ಜಿಲ್ಲೆಗಳಿಗೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಿದ ಸೇನೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸುವಂತೆ ಸ್ಥಳೀಯ ಕಮಾಂಡರ್‌ಗಳಿಗೆ ಸೂಚನೆ ನೀಡಿದ್ದಾರೆ. ಎಲೆ, ರೆಂಬೆಗಳ ದಟ್ಟ ಗೊಂಚಲಿನ ಕೆಳಗೆ ಯಾರಿಗೂ ಕಾಣದಂತಿರುವ ಗುಹೆಗಳನ್ನು ನಾಶ ಮಾಡುವಂತೆಯೂ ಸೈನಿಕರಿಗೆ ಸೂಚಿಸಿದ್ದಾರೆ.
ಪೀರ್ ಪಂಜಾಲ್ ಪರ್ವತಸಾಲು ಎಂದೇ ಹೆಸರುವಾಸಿಯಾಗಿರುವ ರಜೌರಿ– ಪೂಂಛ್‌ನ ಅರಣ್ಯ ಪ್ರದೇಶಗಳಲ್ಲಿ ಗುಹೆಗಳ ಅಡಗುತಾಣಗಳಲ್ಲಿ ಉಗ್ರರು ನೆಲೆಸಿದ್ದರು ಎಂಬ ವರದಿಗಳಿವೆ. ದಾಳಿ ನಡೆಸುವ ಮೊದಲು ಮತ್ತು ದಾಳಿ ನಡೆಸಿದ ನಂತರ ಅವರು ಇಲ್ಲಿ ಆಶ್ರಯ ಪಡೆದಿದ್ದರು. ಈ ಗುಹೆಗಳು ಸುತ್ತು ಬಳಸಿದ ಹಾದಿಗಳನ್ನು ಹೊಂದಿದ್ದು ಉಗ್ರರ ಕಾರ್ಯತಂತ್ರಕ್ಕೆ ಅನುಕೂಲಕರವಾಗಿವೆ.
ಇದನ್ನೂ ಓದಿ: ಈ ವರ್ಷ ಭಾರತಕ್ಕೆ 100 ಡ್ರೋನ್ ಕಳುಹಿಸಿದ ಪಾಕಿಸ್ತಾನ!
ಗುಹೆಗಳ ಒಳ ಪ್ರವೇಶಿಸುವ ಮಾರ್ಗಗಳ ಪತ್ತೆಗೆ ಯತ್ನಿಸಲಾಗಿದೆ. ಕೆಲ ಸ್ಥಳೀಯರ ಬೆಂಬಲದೊಂದಿಗೆ ಆಹಾರ ಪಡೆದು ಈ ಗುಹೆಗಳನ್ನು ಆಶ್ರಯ ತಾಣವಾಗಿ ಉಗ್ರರು ಬಳಸುತ್ತಿದ್ದರು ಎನ್ನಲಾಗಿದೆ. ಈ ಕಾರಣ ಇಲ್ಲಿ ವ್ಯಾಪಕವಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


