ದೇಶ

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಗೆ ಐವರು ಬಲಿ; ಪಂಜಾಬ್‌ನಲ್ಲಿ ಹೈ ಅಲರ್ಟ್ ಘೋಷಣೆ

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೂಕುಸಿತ ಮತ್ತು ಮೇಘಸ್ಫೋಟದ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ ಐವರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ. ಹಠಾತ್ ಪ್ರವಾಹದಿಂದಾಗಿ ಕೆಲವರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಗೆ ಐವರು ಬಲಿ; ಪಂಜಾಬ್‌ನಲ್ಲಿ ಹೈ ಅಲರ್ಟ್ ಘೋಷಣೆ
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ
Published On :

ಚಂಡೀಗಢ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೂಕುಸಿತ ಮತ್ತು ಮೇಘಸ್ಫೋಟದ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ ಐವರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ. ಹಠಾತ್ ಪ್ರವಾಹದಿಂದಾಗಿ ಕೆಲವರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಅವಶೇಷಗಳಡಿ ಸಿಲುಕಿದ್ದ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಿಕ್ಕಿಬಿದ್ದಿರುವ ಜನರನ್ನು ಸ್ಥಳಾಂತರಿಸಲು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.

ಈಮಧ್ಯೆ, ಭಾರಿ ಮಳೆಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಚಕ್ಕಿ ಮೋರ್‌ನಲ್ಲಿ ಚಂಡೀಗಢ-ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ಬಡ್ಡಿ-ನಾಲಗಢ ಹೆದ್ದಾರಿ ಸಂಚಾರ ಬಂದ್ ಆಗಿದ್ದು, ಮಳೆಯಿಂದ ಬಡ್ಡಿ ಮುಖ್ಯ ಸೇತುವೆ ಹಾಳಾಗಿದೆ. ಕಳೆದ ಕೆಲವು ದಿನಗಳಿಂದ ಭೂಕುಸಿತದಿಂದಾಗಿ ಮಂಡಿ ಮತ್ತು ಕುಲು ನಡುವೆ ಕಿರಾತ್‌ಪುರ-ಮನಾಲಿ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಿಮ್ಲಾದಲ್ಲಿ, ಭೂಕುಸಿತದ ನಂತರ ಮಾಲ್ ರಸ್ತೆ ಮತ್ತು ಮುಖ್ಯಮಂತ್ರಿ ನಿವಾಸದ ಬಳಿ ಕೆಲವು ಮರಗಳು ಧರೆಗುರುಳಿವೆ. ಸಂಜೌಲಿ ಬಳಿ ಮರಗಳು ಧರೆಗುರುಳಿದ್ದರಿಂದ ಸಂಜೌಲಿ-ಚೋಟ್ಟಾ ಶಿಮ್ಲಾ ರಸ್ತೆ ಸಂಚಾರ ಬಂದ್ ಆಗಿದೆ. ಭಾಕ್ರಾ-ನಂಗಲ್ ಮತ್ತು ಪಾಂಗ್ ಅಣೆಕಟ್ಟುಗಳಿಗೆ ನೀರಿನ ಒಳಹರಿವು ಬುಧವಾರ ಹೆಚ್ಚಾಗಿರುವುದರಿಂದ ನೆರೆಯ ಪಂಜಾಬ್‌ನಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಸಟ್ಲೇಜ್ ಮತ್ತು ಬಿಯಾಸ್ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇದೆ.

ರಾಜ್ಯ ಮತ್ತು ನೆರೆಯ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯ ನಂತರ ಪಂಜಾಬ್‌ನಲ್ಲಿ ಪ್ರವಾಹದಂತಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾಕ್ರಾ-ನಂಗಲ್‌ಗೆ 1.28 ಲಕ್ಷ ಕ್ಯೂಸೆಕ್ ಮತ್ತು ಪಾಂಗ್‌ಗೆ 1.58 ಲಕ್ಷ ಕ್ಯೂಸೆಕ್ ಒಳಹರಿವು ಇದೆ ಎಂದು ಮೂಲಗಳು ತಿಳಿಸಿವೆ. ಭಾಕ್ರಾ-ನಂಗಲ್ ಅಣೆಕಟ್ಟಿನ ಒಳಹರಿವು 1.05 ಲಕ್ಷ ಕ್ಯೂಸೆಕ್ ಮತ್ತು ಪಾಂಗ್‌ಗೆ 58,702 ಕ್ಯೂಸೆಕ್ ನೀರು ಇತ್ತು. ಭಾಕ್ರಾ ಅಣೆಕಟ್ಟಿನಿಂದ 58,400 ಕ್ಯೂಸೆಕ್ ನೀರು ಮತ್ತು ಪಾಂಗ್ 67,083 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.

ರಾಜ್ಯ ಮತ್ತು ನೆರೆಯ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಶಾಲೆಗಳನ್ನು ಆಗಸ್ಟ್ 6ರವರೆಗೆ ಮುಚ್ಚಲಾಗುವುದು ಎಂದು ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಬೈನ್ಸ್ ಹೇಳಿದ್ದಾರೆ. 

ಈಮಧ್ಯೆ, ಲೂಧಿಯಾನದ ಬಡೋವಾಲ್‌ನಲ್ಲಿ ನವೀಕರಣಗೊಳ್ಳುತ್ತಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಕಟ್ಟಡದ ಒಂದು ಭಾಗವು ಕುಸಿದು ಶಿಕ್ಷಕರೊಬ್ಬರು ಸಾವಿಗೀಡಾಗಿದ್ದಾರೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉತ್ತರಾಖಂಡದಲ್ಲಿ ಮತ್ತೊಂದು ಭೂಕುಸಿತ

ಉತ್ತರಾಖಂಡದ ಜಖಾನ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ. ಗ್ರಾಮದಲ್ಲಿ ಕೆಲ ಕಟ್ಟಡಗಳು ಉರುಳಿದ್ದು, ಮತ್ತೆ ಕೆಲವುಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ. ಈ ಪ್ರದೇಶವು ಸಕ್ರಿಯ ಭೂಕಂಪನ ಪಟ್ಟಿಯ ಅಡಿಯಲ್ಲಿ ಇದ್ದು, ಭವಿಷ್ಯದ ಅಪಾಯದ ಬಗ್ಗೆ ತಜ್ಞರು ಎಚ್ಚರ ನೀಡಿದ್ದಾರೆ. 

ವಿಕಾಸ್ ನಗರ ಉಪವಿಭಾಗಾಧಿಕಾರಿ ವಿನೋದ್ ಕುಮಾರ್ ಮಾತನಾಡಿ, ಜಖಾನ್ ಗ್ರಾಮದಲ್ಲಿ ಬುಧವಾರ ಭೂಕುಸಿತ ಸಂಭವಿಸಿದ್ದು, 10 ಮನೆಗಳು ಸಂಪೂರ್ಣ ಕುಸಿದಿವೆ. ಎರಡು ಭಾಗಶಃ ಹಾನಿಯಾಗಿದೆ. ಏಳು ಗೋಶಾಲೆಗಳು ಸಹ ಕುಸಿದಿವೆ. ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಗ್ರಾಮದಲ್ಲಿ 28 ಕುಟುಂಬಗಳಿದ್ದವು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.