ಬಿಹಾರದಲ್ಲಿ ಭೀಕರ ರಸ್ತೆ ಅಪಘಾತ: 7 ಮಕ್ಕಳು ಸೇರಿ ಸುಮಾರು 15 ಮಂದಿ ದುರ್ಮರಣ, ಮೃತರ ಕುಟುಂಬಕ್ಕೆ ತಲಾ ರೂ.2 ಲಕ್ಷ ಘೋಷಿಸಿದ ಪ್ರಧಾನಿ ಮೋದಿ
ಬಿಹಾರದ ವೈಶಾಲಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ 7 ಮಕ್ಕಳು ಸೇರಿ ಸುಮಾರು 15 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ಪಾಟ್ನ: ಬಿಹಾರದ ವೈಶಾಲಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ 7 ಮಕ್ಕಳು ಸೇರಿ ಸುಮಾರು 15 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ರಸ್ತೆ ಬದಿಯ ಜನವಸತಿ ಪ್ರದೇಶಕ್ಕೆ ಟ್ರಕ್ ನುಗ್ಗಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ನಾಲ್ವರನ್ನು ಉಪವಿಭಾಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈಶಾಲಿ ಜಿಲ್ಲೆಯ ದೇಸರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೇಗವಾಗಿ ಬಂದ ಟ್ರಕ್, ಮಕ್ಕಳ ಸಹಿತ ಹಲವರ ಮೇಲೆ ಹರಿದಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ದುರ್ಘಟನೆಯನ್ನು ದುರಂತ ಎಂದು ಹೇಳಿದ್ದಾರೆ. ಅಲ್ಲದೆ, ಮೃತರ ಕುಟುಂಬಗಳಿಗೆ ನಿಗದಿತ ಪ್ರಾಮಾಣಿತ ವಿಧಾನದ ಪ್ರಕಾರ ಪರಿಹಾರ ನೀಡಲು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ.
ಭೂಯಾನ್ ಬಾಬಾರವರ ಪೂಜೆ ಹಿನ್ನೆಲೆ ಔತಣಕೂಟ ಮುಗಿಸಿ ಎಲ್ಲರೂ ಹಿಂತಿರುಗುತ್ತಿದ್ದರು. ಈ ವೇಳೆ ಪೀಪಲ್ ಟ್ರೀ ಬಳಿ ನಿಂತಿದ್ದ ಜನರ ಮೇಲೆ ಟ್ರಕ್ ಹರಿದಿದೆ. ಘಟನೆ ಸಂಬಂಧಿಸಿದಂತೆ ಹಾಜಿಪುರದಿಂದ ಮಹಾನಾರ್ ಕಡೆಗೆ ವೇಗವಾಗಿ ಟ್ರಕ್ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಟ್ರಕ್ ಚಾಲಕ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದ ಎಂದು ಹೇಳಲಾಗುತ್ತಿದೆ.
ಘಟನೆಯಲ್ಲಿ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದ ಜನರು ಟ್ರಕ್ ಚಾಲಕನ ವಿರುದ್ಧ ಕೆರಳಿದ ಪರಿಣಾಮ ಭಯಕ್ಕೆ ಟ್ರಕ್ ಚಾಲಕ ಟ್ರಕ್ನಲ್ಲೇ ಕುಳಿತುಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದು ಚಾಲಕನನ್ನು ವಶಕ್ಕೆ ಪಡೆದಿದ್ದರೂ ಜನರ ಆಕ್ರೋಶ ಕಡಿಮೆಯಾಗಿಲ್ಲ.
ಘಟನೆ ಬಳಿಕ ಮೃತ ದೇಹಗಳು ಸ್ಥಳದಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಘಟನೆ ವರದಿಯಾದ ಕೂಡಲೇ ಮಹುವಾ ವಿಧಾನಸಭಾ ಕ್ಷೇತ್ರದ ಆರ್‌ಜೆಡಿ ಶಾಸಕ ಡಾ.ಮುಖೇಶ್ ರೋಷನ್ ಹಾಜಿಪುರ ಸದರ್ ಆಸ್ಪತ್ರೆಗೆ ಆಗಮಿಸಿ ಈ ನೋವಿನ ಘಟನೆಗೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಕೇರಳ: ಶಬರಿಮಲೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿ; 20 ಮಂದಿಗೆ ಗಾಯ, 8 ವರ್ಷದ ಬಾಲಕ ಸೇರಿ ಮೂವರ ಸ್ಥಿತಿ ಗಂಭೀರ
ಘಟನೆ ನಡೆದ ಕೂಡಲೇ ಡಿಎಂ, ಎಸ್‌ಡಿಎಂ ಮತ್ತು ಎಸ್‌ಪಿ ನೇತೃತ್ವದಲ್ಲಿ ಜಿಲ್ಲಾಡಳಿತದ ಸಂಪೂರ್ಣ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ಎಲ್ಲಾ ಮೃತರ ಮೃತದೇಹಗಳನ್ನು ಮಧ್ಯರಾತ್ರಿ 1.30 ರ ಸುಮಾರಿಗೆ ಮರಣೋತ್ತರ ಪರೀಕ್ಷೆಗಾಗಿ ಹಾಜಿಪುರ ಸದರ್ ಆಸ್ಪತ್ರೆಗೆ ರವಾನಿಸಲಾಯಿತು. ಆರೋಪಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಹಾಜಿಪುರ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಇನ್ನು ಅಪಘಾತದ ಬಗ್ಗೆ ಪ್ರಧಾನಿ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಬಿಹಾರದ ವೈಶಾಲಿಯಲ್ಲಿ ನಡೆದ ಅಪಘಾತ ದುಃಖಕರವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಬೇಗ ಗುಣಮುಖರಾಗಲಿ. ಮೃತರ ಮುಂದಿನ ಕುಟುಂಬಗಳಿಗೆ 2 ಲಕ್ಷ ರೂಪಾಯಿ, ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ಘೋಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


