ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ: ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರ ರಾಜನ್
ತೆಲಂಗಾಣದಲ್ಲಿ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಹಗ್ಗಜಗ್ಗಾಟ ಏರ್ಪಟ್ಟಿರುವ ನಡುವಲ್ಲೇ ರಾಜ್ಯಪಾಲೆ ತಮಿಳಿಸೈ ಸೌಂದರ ರಾಜನ್ ಅವರು ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ.

ಹೈದರಾಬಾದ್: ತೆಲಂಗಾಣದಲ್ಲಿ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಹಗ್ಗಜಗ್ಗಾಟ ಏರ್ಪಟ್ಟಿರುವ ನಡುವಲ್ಲೇ ರಾಜ್ಯಪಾಲೆ ತಮಿಳಿಸೈ ಸೌಂದರ ರಾಜನ್ ಅವರು ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ.
ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದ್ದು, ನನ್ನ ಗೌಪ್ಯತೆಗೆ ಹಸ್ತಕ್ಷೇಪ ಮಾಡಲಾಗುತ್ತಿದೆ. ರಾಜ್ಯದಲ್ಲಿ ವಿಶೇಷವಾಗಿ ರಾಜ್ಯಪಾಲರ ಕಚೇರಿಯನ್ನು ಗೌರವಿಸುವಲ್ಲಿ "ಪ್ರಜಾಸತ್ತಾತ್ಮಕವಲ್ಲದ ಪರಿಸ್ಥಿತಿ" ಇದೆ ಎಂದು ರಾಜ್ಯಪಾಲ ತಮಿಳಿಸೈ ಸೌಂದರ ರಾಜನ್ ಅವರು ಹೇಳಿದ್ದಾರೆ.
ರಾಜಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮಾಜಿ ಎಡಿಸಿ (ಸಹಾಯಕ-ಡಿ-ಕ್ಯಾಂಪ್) ಮೇಜರ್ ತುಷಾರ್ ಭಾಸಿನ್ ಅವರ ಹೆಸರನ್ನು ಟಿಆರ್‌ಎಸ್ ಶಾಸಕರ ಖರೀದಿ ಪ್ರಕರಣದಲ್ಲಿ ತಳುಕು ಹಾಕಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಟಿಆರ್‌ಎಸ್ ನಾಯಕ ಕ್ರಿಶಾಂಕ್ ಅವರು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ಹರಿಬಿಟ್ಟಿದ್ದಾರೆ. ಶಾಸಕರ ಖರೀದಿ ಪ್ರಕರಣದಲ್ಲಿ ರಾಜಭವನದ ಪಾತ್ರವಿದೆ ಎಂದು ಬಿಂಬಿಸಲು ತುಷಾರ್ ಅವರ ಹೆಸರನ್ನು ಪೋಸ್ಟ್ ಮಾಡಲಾಗಿದೆ. ಶಾಸಕರ ಖರೀದಿ ಎಂಬ ಅಸಹ್ಯಕರ ಪ್ರಕರಣದಲ್ಲಿ ರಾಜಭವನವನ್ನು ಏಕೆ ಎಳೆದು ತರಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಕೆಲ ಮಸೂದೆಗಳನ್ನು ಉದ್ದೇಶಪೂರ್ವಕವಾಗಿ ರಾಜ್ಯಪಾಲರು ತಡೆಹಿಡಿದಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದಕ್ಕೆ ಅನುಮೋದನೆ ನೀಡುವಲ್ಲಿ ಯಾವುದೇ ವಿಳಂಬ ನೀತಿ ಅನುಸರಿಸುತ್ತಿಲ್ಲ. ಆದರೆ ಕರಡು ನಿಯಮಗಳನ್ನು ವಿವರವಾಗಿ ಪರಿಶೀಲಿಸಲು ಬಯಸಿದ್ದೇನೆಂದು ಸ್ಪಷ್ಟಪಡಿಸಿದರು.
ಇದೇ ವೇಳೆ ತಮ್ಮ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಬಾಂಬ್ ಸಿಡಿಸಿದ ರಾಜ್ಯಪಾಲೆ, ನನ್ನ ದೂರವಾಣಿಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಬಲವಾದ ಸಂಶಯ ನನಗಿದೆ. ರಾಜ್ಯದಲ್ಲಿ ರಾಜ್ಯಪಾಲರಿಗೆ ಗೌರವ ನೀಡುವ ವಿಚಾರದಲ್ಲಿ ಪ್ರಜಾಸತ್ತಾತ್ಮಕವಲ್ಲದ ಪರಿಸ್ಥಿತಿ ಇದೆ. ಈ ವಿಷಯಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿದರು. ಬಳಿಕ ತಮ್ಮ ಕಚೇರಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಮರ್ಥಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


