ದೇಶ

ಪಿಎನ್ ಬಿ ವಂಚನೆ ಪ್ರಕರಣ: ಉದ್ಯಮಿ ಮೆಹುಲ್‌ ಚೋಕ್ಸಿ ಹಸ್ತಾಂತರಕ್ಕೆ ಡೊಮಿನಿಕಾ ಕೋರ್ಟ್‌ ತಡೆ

ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಸಾವಿರಾರು ಕೋಟಿ ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾಗಿ ಡೊಮಿನಿಕಾದಲ್ಲಿ ಬಂಧನವಾಗಿರುವ ಉದ್ಯಮಿ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಅಲ್ಲಿನ ಕೋರ್ಟ್ ತಡೆ ನೀಡಿದೆ.

ಪಿಎನ್ ಬಿ ವಂಚನೆ ಪ್ರಕರಣ: ಉದ್ಯಮಿ ಮೆಹುಲ್‌ ಚೋಕ್ಸಿ ಹಸ್ತಾಂತರಕ್ಕೆ ಡೊಮಿನಿಕಾ ಕೋರ್ಟ್‌ ತಡೆ
ಸಂಗ್ರಹ ಚಿತ್ರ
Published On :

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಸಾವಿರಾರು ಕೋಟಿ ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾಗಿ ಡೊಮಿನಿಕಾದಲ್ಲಿ ಬಂಧನವಾಗಿರುವ ಉದ್ಯಮಿ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಅಲ್ಲಿನ ಕೋರ್ಟ್ ತಡೆ ನೀಡಿದೆ.

ಡೊಮಿನಿಕಾದಲ್ಲಿ ಬಂಧನಕ್ಕೊಳಗಾದ ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿ ಅವರಿಗೆ ಕಾನೂನು ಸಲಹೆ ಪಡೆಯಲು ಅವಕಾಶ ನೀಡದಿರುವುದಕ್ಕೆ ಅವರ ಪರ ವಕೀಲರು, ಡೊಮಿನಿಕಾ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ನ್ಯಾಯಾಲಯ ಚೋಕ್ಸಿ ಹಸ್ತಾಂತರ ಪ್ರಕ್ರಿಯೆಗೆ ತಡೆ  ನೀಡಿದೆ. 

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾರತದಿಂದ ತಲೆಮರೆಸಿಕೊಂಡಿದ್ದ ಚೋಕ್ಸಿ, ಭಾನುವಾರ ಆಂಟಿಗುವಾ ಮತ್ತು ಬಾರ್ಬುಡಾದಿಂದ ಕಾಣೆಯಾಗಿದ್ದರು. ಅಲ್ಲಿಂದ ಸುಮಾರು 100 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಡೊಮಿನಿಕಾದಲ್ಲಿ ಅಕ್ರಮ ಪ್ರವೇಶದ ಕಾರಣದಿಂದ ಅವರನ್ನು  ಬಂಧಿಸಿರುವ ಕುರಿತು ಅಗರ್ವಾಲ್ ಅನುಮಾನ ವ್ಯಕ್ತಪಡಿಸಿದ್ದರು. ಡೊಮಿನಿಕಾದ ಚೋಕ್ಸಿ ಪರ ಕಾನೂನು ತಂಡವು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ ನಂತರ ಮೆಹುಲ್ ಚೋಕ್ಸಿಯ ಹಸ್ತಾಂತರ ಪ್ರಕ್ರಿಯೆಗೆ ಡೊಮಿನಿಕಾ ನ್ಯಾಯಾಲಯ ತಡೆ ನೀಡಿದೆ. ಈ ವಿಷಯವು ಮೇ 28 ರಂದು ಸ್ಥಳೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಮತ್ತೆ ವಿಚಾರಣೆಗೆ ಬರುವ ನಿರೀಕ್ಷೆಯಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರ ಕಾನೂನು ಸಲಹೆಗಾರ ವಿಜಯ್ ಅಗರ್ವಾಲ್ ಅವರು, 'ಕಾನೂನು ತಂಡವು ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದೆ ಮತ್ತು ಮೆಹುಲ್ ಚೋಕ್ಸಿಗೆ ಕಾನೂನು ಸಲಹೆ ಪಡೆಯಲು ಅವಕಾಶ ನಿರಾಕರಿಸಲಾಗಿದೆ, ಇದು ಸಾಂವಿಧಾನಿಕ  ಹಕ್ಕುಗಳ ಅಭಾವವನ್ನು ಎತ್ತಿ ತೋರಿಸಿದೆ. ಡೊಮಿನಿಕಾದಲ್ಲಿ ಚೋಕ್ಸಿಯ ನಿಗೂಢ ಕಣ್ಮರೆ ಮತ್ತು ಬಂಧನದ ಸಂಪೂರ್ಣ ಪ್ರಸಂಗವೇ ಅನುಮಾನಾಸ್ಪದವಾಗಿದೆ. 

ಅಲ್ಲದೆ ಆಂಟಿಗುವಾ ಮತ್ತು ಬಾರ್ಬುಡಾ ಹಾಗೂ ಡೊಮಿನಿಕಾದಲ್ಲಿನ ಚೋಕ್ಸಿ ಪರ ವಕೀಲರು ಅವರ ಸಾಂವಿಧಾನಿಕ ಹಕ್ಕುಗಳ ಪ್ರಕಾರ ಚೋಕ್ಸಿಯೊಂದಿಗೆ ಕಾನೂನು ಸಂದರ್ಶನ ನಡೆಸಲು ಪ್ರಯತ್ನಿಸಿದ್ದರು. ಆದರೆ, ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಹೆಚ್ಚಿನ ಪ್ರಯತ್ನದ ನಂತರ ಅವರು ಚೋಕ್ಸಿಯೊಂದಿಗೆ ಎರಡು ನಿಮಿಷ ಮಾತನಾಡಲು ಸಾಧ್ಯವಾಯಿತು. ಕಣ್ಣು ತೆರೆಯುವಷ್ಟರಲ್ಲಿ ಆಗಿಹೋದ ಭಯಾನಕ ಅನುಭವವನ್ನು ಚೋಕ್ಸಿ ವಿವರಿಸಿದರು ಮತ್ತು ಅವರು ಆಂಟಿಗುವಾದಿಂದ ಸ್ವಯಂಪ್ರೇರಣೆಯಿಂದ ಎಲ್ಲಿಗೂ ಹೋಗುತ್ತಿರಲಿಲ್ಲ ಎಂಬ ನನ್ನ ನಿಲುವನ್ನು ಸಮರ್ಥಿಸುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ.

ಹಲವು ಪ್ರಯತ್ನಗಳ ಬಳಿಕ ಚೋಕ್ಸಿ ಜೊತೆಗೆ ಚುಟುಕು ಮಾತುಕತೆಗೆ ಅವಕಾಶ ಸಿಕ್ಕಿದ್ದನ್ನು ಡೊಮಿನಿಕಾದ ಅವರ ವಕೀಲ ವೇಯ್ನ್ ಮಾರ್ಷ್ ಅವರು ರೇಡಿಯೊ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. 'ನನ್ನನ್ನು ಆಂಟಿಗುವಾ ಮತ್ತು ಬಾರ್ಬುಡಾದ ಜಾಲಿ ಹಾರ್ಬರ್‌ನಲ್ಲಿ ಭಾರತೀಯರಂತೆ ಕಾಣುವ ವ್ಯಕ್ತಿಗಳು ಮತ್ತು ಆಂಟಿಗುವಾದ ಪೊಲೀಸರು ಕರೆದುಕೊಂಡು ಹೋಗಿದ್ದರು, ನಂತರ ಹಡಗಿನಲ್ಲಿ ಕೂರಿಸಿದ್ದರು' ಎಂದು ಚೋಕ್ಸಿ ತಿಳಿಸಿರುವುದಾಗಿ ಹೇಳಿದ್ದಾರೆ. ಅಂತೆಯೇ ಕಣ್ಣುಗಳು ಊದಿಕೊಂಡು ಮತ್ತು ತನ್ನ ಜೀವಕ್ಕಾಗಿ ಹೆದರುತ್ತಿದ್ದ ಚೋಕ್ಸಿಯ ದೇಹದ ಮೇಲೆ ಗಾಯದ ಗುರುತುಗಳನ್ನು ನೋಡಿದ್ದೇನೆ. ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದ ಪ್ರಜೆಯಾಗಿದ್ದಾರೆ. ಭಾರತಕ್ಕೆ ವಾಪಸ್ ಕಳುಹಿಸಲು ಅವರು ಭಾರತದ ಪ್ರಜೆಯಲ್ಲ ಎಂದು ಮಾರ್ಷ್ ಹೇಳಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.