ಬಂಗಾಳಕ್ಕೆ ಟಿಎಂಸಿ, ತ.ನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಲ್ ಡಿಎಫ್ ಗೆಲುವು; ಅಸ್ಸಾಂ ನಲ್ಲಿ ಬಿಜೆಪಿ ಮತ್ತೆ ಅಧಿಕಾರದತ್ತ
ಕೊರೋನಾ ಭೀತಿಯ ನಡುವೆಯೂ ತೀವ್ರ ಕುತೂಹಲ ಮೂಡಿಸಿದ್ದ ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ಒಂದು ಹಂತಕ್ಕೆ ಬಂದಿದ್ದು, ಗೆಲುವಿನ ಅಂದಾಜು ಲಭ್ಯವಾಗತೊಡಗಿದೆ.

ನವದೆಹಲಿ: ಕೊರೋನಾ ಭೀತಿಯ ನಡುವೆಯೂ ತೀವ್ರ ಕುತೂಹಲ ಮೂಡಿಸಿದ್ದ ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ಒಂದು ಹಂತಕ್ಕೆ ಬಂದಿದ್ದು, ಗೆಲುವಿನ ಅಂದಾಜು ಲಭ್ಯವಾಗತೊಡಗಿದೆ.
ಅದರಲ್ಲೂ ಎಲ್ಲರ ಚಿತ್ತ ಇದ್ದದ್ದು ಪಶ್ಚಿಮ ಬಂಗಾಳದ ಮೇಲೆ. ಈ ರಾಜ್ಯದಲ್ಲಿ ತೀವ್ರ ಅಬ್ಬರದ ಪ್ರಚಾರ ನಡೆಸಿದ್ದ ಬಿಜೆಪಿ ಪ್ರಾರಂಭಿಕ ಹಂತದ ಮತ ಎಣಿಕೆ ವೇಳೆ ಟಿಎಂಸಿ ಗೆ ಭರ್ಜರಿ ಪೈಪೋಟಿಯನ್ನೇ ನೀಡಿತ್ತಾದರೂ ಕ್ರಮೇಣ ತನ್ನ ಮುನ್ನಡೆಯ ಅಂತರವನ್ನು ಕಳೆದುಕೊಳ್ಳಲಾರಂಭಿಸಿತು. ಈ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮ್ಯಾಜಿಕ್ ನಂಬರ್ ಸಂಖ್ಯೆಗೆ ಅಗತ್ಯವಿರುವಷ್ಟು ಮುನ್ನಡೆ ಸಾಧಿಸಿ ಮೂರನೇ ಬಾರಿಗೆ ಅಧಿಕಾರ ಹಿಡಿದಿದೆ. ಬಿಜೆಪಿಗೆ ಅಧಿಕಾರ ಹಿಡಿಯುವ ಕನಸು ನನಸಾಗಿಲ್ಲವಾದರೂ ನೆಲೆಯೇ ಇಲ್ಲದ ರಾಜ್ಯದಲ್ಲಿ ಈ ಬಾರಿ ಟಿಎಂಸಿಗೆ ಪ್ರಬಲ ಪೈಪೋಟಿ ನೀಡಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಇನ್ನು ಯಥಾ ಪ್ರಕಾರ ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವಕ್ಕೆ ಈ ಬಾರಿ ಮತದಾರ ಮಣೆ ಹಾಕಿಲ್ಲ. ಆದರೆ ಆಡಳಿತಾರೂಢ ಎಐಎಡಿಎಂಕೆಗೆ ಮುಖಭಂಗವಾಗಿದ್ದು, ತಮಿಳುನಾಡಿನಲ್ಲಿ ಡಿಎಂಕೆ ಆಡಳಿತ ಪ್ರಾರಂಭವಾಗಲಿದೆ.
ಕೇರಳದಲ್ಲಿ ಆಡಳಿತಾರೂಢ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ 140 ಕ್ಷೇತ್ರಗಳ ಪೈಕಿ 89 ರಲ್ಲಿ ಮುನ್ನಡೆಯಲ್ಲಿದ್ದು ಬಹುಮತ ಪಡೆಯುವ ಎಲ್ಲಾ ಸಾಧ್ಯತೆಗಳೂ ಇವೆ. ವಿಪಕ್ಷ ಯುಡಿಎಫ್ 45 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಅಸ್ಸಾಂ ನಲ್ಲಿ 126 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್ ಡಿಎ 79 ರಲ್ಲಿ ಮುನ್ನಡೆಯಲ್ಲಿದ್ದರೆ, ಯುಪಿಎ 46 ರಲ್ಲಿ ಇತರರು ಒಂದರಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಎನ್ ಡಿಎ ಅಧಿಕಾರ ಹಿಡಿಯುವುದು ಸ್ಪಷ್ಟವಾದಂತಿದೆ.
ಇನ್ನು 30 ಕ್ಷೇತ್ರಗಳಿರುವ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಇತ್ತೀಚಿನ ವರದಿಯ ಪ್ರಕಾರ ಎನ್ ಆರ್ ಸಿ ಮೈತ್ರಿಕೂಟ 11 ರಲ್ಲಿ, ಯುಪಿಎ 6 ರಲ್ಲಿ ಮುನ್ನಡೆಯಲ್ಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


