ದೇಶ

ಘಾಜಿಯಾಬಾದ್‌ ವೃದ್ಧನ ಮೇಲೆ ಹಲ್ಲೆ ವಿಡಿಯೋ: ಟ್ವಿಟರ್‌ ಇಂಡಿಯಾ ಎಂಡಿಗೆ ಉತ್ತರ ಪ್ರದೇಶ ಪೊಲೀಸ್ ನೋಟಿಸ್‌!

ರಾಷ್ಟ್ರದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ ವೃದ್ಧರೊಬ್ಬರಿಗೆ ಹಲ್ಲೆ ಮಾಡಿ, ಜೈ ಶ್ರೀರಾಮ್‌ ಹೇಳುವಂತೆ ಒತ್ತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ ಇಂಡಿಯಾ ಎಂಡಿಗೆ ಉತ್ತರ ಪ್ರದೇಶ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಘಾಜಿಯಾಬಾದ್‌ ವೃದ್ಧನ ಮೇಲೆ ಹಲ್ಲೆ ವಿಡಿಯೋ: ಟ್ವಿಟರ್‌ ಇಂಡಿಯಾ ಎಂಡಿಗೆ ಉತ್ತರ ಪ್ರದೇಶ ಪೊಲೀಸ್ ನೋಟಿಸ್‌!
ಹಲ್ಲೆ ವಿಡಿಯೋ ಚಿತ್ರ
Published On :

ಲಖನೌ: ರಾಷ್ಟ್ರದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ ವೃದ್ಧರೊಬ್ಬರಿಗೆ ಹಲ್ಲೆ ಮಾಡಿ, ಜೈ ಶ್ರೀರಾಮ್‌ ಹೇಳುವಂತೆ ಒತ್ತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ ಇಂಡಿಯಾ ಎಂಡಿಗೆ ಉತ್ತರ ಪ್ರದೇಶ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ವೈರಲ್‌ ಆಗಿದ್ದ ವಿಡಿಯೊದಲ್ಲಿ ನಾಲ್ವರು ಯುವಕರು ವೃದ್ಧನ ಗಡ್ಡವನ್ನು ಕತ್ತರಿಸಿ, ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ ಪಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ಕೋಮುಸಂಘರ್ಷಕ್ಕೆ ದಾರಿ ಮಾಡಿಕೊಡುವ ಪೋಸ್ಟ್‌ ಎಂದು ಪೊಲೀಸರು ಟ್ವಿಟರ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು.  ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ದಿನದಲ್ಲಿ ಲೋನಿ ಬಾರ್ಡರ್‌ನಲ್ಲಿರುವ ಪೊಲೀಸ್‌ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಟ್ವಿಟರ್ ಇಂಡಿಯಾ ಎಂಡಿ ಮನೀಶ್‌ ಮಹೇಶ್ವರಿ ಅವರಿಗೆ ಉತ್ತರ ಪ್ರದೇಶದ ಘಾಜಿಯಾಬಾದ್‌ ಪೊಲೀಸರು ಶುಕ್ರವಾರ ನೋಟಿಸ್‌ ಜಾರಿ ಮಾಡಿದ್ದಾರೆ.

ಎಫ್ ಆರ್ ನಲ್ಲಿ ಪ್ರಮುಖ ಆಂಶಗಳೇ ಮಿಸ್ಸಿಂಗ್
ಇನ್ನು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿರುವಂತೆ ವೈರಲ್‌ ವಿಡಿಯೊದಲ್ಲಿ ಹಲ್ಲೆಗೆ ಒಳಗಾದ ವೃದ್ಧ ಸೈಫಿ 'ಜೈ ಶ್ರೀರಾಮ್‌' ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದರು ಎನ್ನಲಾಗಿದೆ. ಆದರೆ ಎಫ್‌ಐಆರ್‌ನಲ್ಲಿ ಅಂತಹ ಯಾವುದೇ ಆರೋಪಗಳನ್ನು ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 'ಆರೋಪಿಗಳು  ಸೈಫಿ ಮಾರಾಟ ಮಾಡಿದ ತಾಯತದ ಬಗ್ಗೆ ಅಸಮಾಧಾನಗೊಂಡಿದ್ದರು. ಹಲ್ಲೆಯ ಹಿಂದೆ ಕೋಮುದ್ವೇಷವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.  

ಪತ್ರಕರ್ತರ ಮೇಲಿನ ದೂರು ಹಿಂಪಡೆಯುವಂತೆ ಸಂಪಾದಕರ ಒಕ್ಕೂಟ ಆಗ್ರಹ
ಇದೇ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬರ ವಿಡಿಯೊ ಹಂಚಿಕೊಂಡ ಕಾರಣಕ್ಕೆ ಉತ್ತರ ಪ್ರದೇಶದ ಸುದ್ದಿಸಂಸ್ಥೆ ಮತ್ತು ಕೆಲವು ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಸಂಪಾದಕರ ಕೂಟ (ಇಜಿಐ) ಖಂಡಿಸಿದ್ದು, ದೂರು ಹಿಂಪಡೆಯುವಂತೆ ಒತ್ತಾಯಿಸಿದೆ. ವಯಸ್ಸಾದ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ  ನಡೆಸಲಾಗಿದೆ ಎಂದು ಟ್ವೀಟ್ ಮಾಡಿದ್ದಕ್ಕಾಗಿ ‘ದಿ ವೈರ್’ ಮತ್ತು ಹಲವಾರು ಪತ್ರಕರ್ತರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಎಫ್ಐಆರ್ ಹಾಕಿತ್ತು. 

ಹಲವು ಸುದ್ದಿಸಂಸ್ಥೆಗಳ ವಿರುದ್ಧ ಎಫ್ಐಆರ್
ಇದೇ ಪ್ರಕರಣದ ವಿಚಾರವಾಗಿ ಟ್ವಿಟರ್ ಐಎನ್‌ಸಿ, ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ, ದಿ ವೈರ್‌ ನ್ಯೂಸ್ ಪೋರ್ಟಲ್, ಪತ್ರಕರ್ತರಾದ ಮೊಹಮ್ಮದ್ ಜುಬೈರ್, ರಾಣಾ ಅಯೂಬ್, ಸಬಾ ನಖ್ವಿ ಮತ್ತು ಕಾಂಗ್ರೆಸ್ ಮುಖಂಡರಾದ ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ ಮತ್ತು ವಿಡಿಯೊವನ್ನು ಸಾಮಾಜಿಕ  ಜಾಲತಾಣದಲ್ಲಿ ಹಂಚಿಕೊಂಡ ಸಾಮ ಮೊಹಮ್ಮದ್ ವಿರುದ್ಧ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.