ಇಸ್ರೇಲ್ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನ್ನೆಟ್ಟ್ ಆಯ್ಕೆ; ಪ್ರಧಾನಿ ಮೋದಿ ಶುಭ ಹಾರೈಕೆ
ಇಸ್ರೇಲ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ನಫ್ತಾಲಿ ಬೆನ್ನೆಟ್ಟ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಕೆ ಮಾಡಿದ್ದಾರೆ.

ನವದೆಹಲಿ: ಇಸ್ರೇಲ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ನಫ್ತಾಲಿ ಬೆನ್ನೆಟ್ಟ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಕೆ ಮಾಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಭಾರತ ಮತ್ತು ಇಸ್ರೇಲ್ ಉಭಯ ದೇಶಗಳ ನಡುವಿನ ಸಂಬಂಧವನ್ನು ಗಾಢವಾಗಿಸಲು ನೂತನ ಪ್ರಧಾನಿ ನಫ್ತಾಲಿ ಬೆನ್ನೆಟ್ಟ್ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ಮುಂದಿನ ವರ್ಷ ರಾಜತಾಂತ್ರಿಕ ಸಂಬಂಧಗಳ ಉನ್ನತೀಕರಣದ 30 ವರ್ಷಗಳನ್ನು ನಾವು ಆಚರಿಸುತ್ತಿದ್ದಂತೆ, ನಿಮ್ಮನ್ನು ಭೇಟಿ ಮಾಡಲು ಮತ್ತು ನಮ್ಮ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಗಾಢವಾಗಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಾರ್ಯವೈಖರಿಯನ್ನೂ ಶ್ಲಾಘಿಸಿದ ಪ್ರಧಾನಿ ಮೋದಿ ನೆತನ್ಯಾಹು ನಾಯಕತ್ವ ಮತ್ತು ಭಾರತ-ಇಸ್ರೇಲ್ ಕಾರ್ಯತಂತ್ರದ ಸಹಭಾಗಿತ್ವಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಇಸ್ರೇಲ್ ರಾಜ್ಯದ ಪ್ರಧಾನ ಮಂತ್ರಿಯಾಗಿ ನಿಮ್ಮ ಯಶಸ್ವಿ ಅಧಿಕಾರಾವಧಿಯನ್ನು ನೀವು ಪೂರ್ಣಗೊಳಿಸಿದ್ದೀರಿ. ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ನಿಮ್ಮ ನಾಯಕತ್ವ ಮತ್ತು ವೈಯಕ್ತಿಕ ಗಮನಕ್ಕಾಗಿ ನನ್ನ ಆಳವಾದ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರನ್ನು ಭಾನುವಾರ ಪದಚ್ಯುತಗೊಳಿಸಲಾಗಿದ್ದು, ನಫ್ತಾಲಿ ಬೆನೆಟ್ ಅವರು ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ನೇತನ್ಯಾಹು ಬೆಂಬಲಿಗರ ಗದ್ದಲದ ನಡುವಯೇ, ಅವರ ಪದಚ್ಯುತಿಗೆ 120 ಸದಸ್ಯ ಬಲದ ಇಸ್ರೇಲ್ ಸಂಸತ್ ಅನುಮೋದನೆ ನೀಡಿತು. ಇದರೊಂದಿಗೆ ಕಳೆದ 12 ವರ್ಷಗಳಿಂದಲೂ ಪ್ರಧಾನಿಯಾಗಿದ್ದ ನೇತನ್ಯಾಹು ಅವರ ಅಧಿಕಾರ ಕೊನೆಗೊಂಡಂತಾಗಿದೆ.
ಮಾಜಿ ರಕ್ಷಣಾ ಸಚಿವರೂ ಆಗಿರುವ 49 ವರ್ಷದ ನಫ್ತಾಲಿ ಅವರು ಬಲಪಂಥೀಯ ಪಕ್ಷ ಯಾಮಿನಿ ಪಾರ್ಟಿಯ ಮುಖಂಡ. ಅವರು ಸೈದ್ಧಾಂತಿಕವಾಗಿ ವಿಭಿನ್ನ ನಿಲುವುಗಳನ್ನು ಹೊಂದಿರುವ ಎಡಪಂಥೀಯ, ಬಲಪಂಥೀಯ, ಅರಬ್ ಪಕ್ಷಗಳ ಮೈತ್ರಿಕೂಟದ ನಾಯಕರಾಗಿದ್ದಾರೆ. ನೂತನ ಸರ್ಕಾರದಲ್ಲಿ 9 ಜನ ಮಹಿಳೆಯರು ಸೇರಿ 27 ಜನ ಸಚಿವರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


