ಜಮ್ಮು-ಕಾಶ್ಮೀರದಲ್ಲಿ ಮುಂದುವರಿದ ಎನ್ ಕೌಂಟರ್: ಮೂವರು ಉಗ್ರರ ಹತ್ಯೆ, ಯೋಧನಿಗೆ ಗಾಯ
ಭದ್ರತಾ ಪಡೆ ಪೊಲೀಸರು ಮತ್ತು ಉಗ್ರಗಾಮಿಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿ ಯೋಧರೊಬ್ಬರು ಗಾಯಗೊಂಡಿರುವ ಘಟನೆ ಉತ್ತರ ಕಾಶ್ಮೀರದ ಬಂಡಿಪೊರಾದಲ್ಲಿ ಭಾನುವಾರ ನಡೆದಿದೆ.

ಶ್ರೀನಗರ: ಭದ್ರತಾ ಪಡೆ ಪೊಲೀಸರು ಮತ್ತು ಉಗ್ರಗಾಮಿಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿ ಯೋಧರೊಬ್ಬರು ಗಾಯಗೊಂಡಿರುವ ಘಟನೆ ಉತ್ತರ ಕಾಶ್ಮೀರದ ಬಂಡಿಪೊರಾದಲ್ಲಿ ಭಾನುವಾರ ನಡೆದಿದೆ.
ಪೊಲೀಸರು, ಸಿಆರ್ ಪಿಎಫ್, ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಸುಂಬ್ಲಾರ್ ಜಿಲ್ಲೆಯ ಶೊಕ್ ಬಾಬ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿ ಪ್ರದೇಶವನ್ನು ಸುತ್ತುವರಿಯಿತು. ಉಗ್ರರ ಚಲನವಲನಗಳ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು.
ಪೊಲೀಸರು ಮತ್ತು ಯೋಧರು ಬಂದಿರುವ ಮಾಹಿತಿ ಸಿಕ್ಕಿದ ಕೂಡಲೇ ಅವಿತು ಕುಳಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಅದಕ್ಕೆ ಯೋಧರು ಪ್ರತ್ಯುತ್ತರ ನೀಡಿದಾಗ ಎನ್ ಕೌಂಟರ್ ಏರ್ಪಟ್ಟಿತು. ಕಾಳಗದಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ. ಯೋಧರೊಬ್ಬರಿಗೆ ಗಾಯವಾಗಿದೆ. ಕೂಡಲೇ ಅವರನ್ನು ಶ್ರೀನಗರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸ್ಥಳದಿಂದ ಇನ್ನಷ್ಟು ಉಗ್ರರು ತಪ್ಪಿಸಿಕೊಂಡು ಹೋಗದಂತೆ ಹೆಚ್ಚಿನ ಭದ್ರತಾ ಪಡೆಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಸೇನಾ ಯೋಧ ಗಣಿ ಸ್ಫೋಟದಲ್ಲಿ ಹುತಾತ್ಮ: ಈ ಮಧ್ಯೆ, ಪೂಂಚ್ ಜಿಲ್ಲೆಯ ಮೆಂದರ್ ನ ಕೃಷ್ಣ ಘಾಟಿ ವಲಯದಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ ಸಂಭವಿಸಿದ ಗಣಿ ಸ್ಫೋಟದಲ್ಲಿ ಆಕಸ್ಮಿಕವಾಗಿ ಸಿಪಾಯಿ ಕಮಲ್ ದೇವ್ ವೈದ್ಯ ಎಂಬುವವರು ಹುತಾತ್ಮರಾಗಿದ್ದಾರೆ. ಕರ್ತವ್ಯದಲ್ಲಿದ್ದ ವೇಳೆ ಸಿಪಾಯಿ ವೈದ್ಯ ಅವರು ಗಣಿ ಸ್ಫೋಟದಲ್ಲಿ ತೀವ್ರ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೃತಪಟ್ಟಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಕುಲ್ಗಾಮ್ ಎನ್ ಕೌಂಟರ್: ಜಮ್ಮು-ಕಾಶ್ಮೀರದ ಕುಲ್ಗಾಮ್ ನ ಮುನಂದ್ ಪ್ರದೇಶದಲ್ಲಿ ಎನ್ ಕೌಂಟರ್ ಮುಂದುವರಿದಿದ್ದು ಇದುವರೆಗೆ ಓರ್ವ ಉಗ್ರ ಹತನಾಗಿದ್ದಾನೆ.ಪೊಲೀಸರು ಮತ್ತು ಭದ್ರತಾ ಪಡೆಗಳು ಸದ್ಯ ಸ್ಥಳದಲ್ಲಿದ್ದು ಶೋಧ ಕಾರ್ಯ ಮುಂದುವರಿದಿದೆ, ಹೆಚ್ಚಿನ ವಿವರ ಲಭ್ಯವಾಗಿಲ್ಲ ಎಂದು ಜಮ್ಮು-ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
ಕಳೆದ ರಾತ್ರಿ ಮೂವರು ಉಗ್ರರು ಅಡಗಿ ಕುಳಿತಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಸೇನೆ ಮತ್ತು ಪೊಲೀಸರ ತಂಡ ದಾಳಿ ನಡೆಸಿತು. ಎನ್ ಕೌಂಟರ್ ನಲ್ಲಿ ಸದ್ಯ ಓರ್ವ ಅಪರಿಚಿತ ಉಗ್ರ ಹತನಾಗಿದ್ದಾನೆ. ಶೋಧ ಕಾರ್ಯ ಮುಂದುವರಿದಿದೆ ಎಂದು ಕಾಶ್ಮೀರ ವಲಯ ಐಜಿ ವಿಜಯ್ ಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


