ಬಾಯ್ ಫ್ರೆಂಡ್ ಗೆ ಪಾಠ ಕಲಿಸಲು ಅತ್ಯಾಚಾರದ ನಾಟಕವಾಡಿದ ಯುವತಿ
ಕಳೆದ ಮಂಗಳವಾರ ಯುವತಿ ತನ್ನ ಮನೆಯವರ ಬಳಿ ತನ್ನ ಮೇಲೆ ಮೂವರು ವ್ಯಕ್ತಿಗಳು ಅತ್ಯಾಚಾರ ನಡೆಸಿರುವುದಾಗಿ ಹೇಳಿಕೊಂಡಿದ್ದಳು. ಯುವತಿಯ ಹೇಳಿಕೆಯಿಂದ ಕಂಗಾಲಾದ ಪಾಲಕರು ಒಡನೆಯೇ ಹೈದರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹೈದರಾಬಾದ್: ನಗರದಲ್ಲಿ ಯುವತಿ ಮೇಲೆ ನಡೆದಿದೆ ಎನ್ನಲಾದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಸಂತ್ರಸ್ತ ಯುವತಿ ಸುಳ್ಳು ದೂರು ನೀಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಆಕೆ ತನ್ನ ಬಾಯ್ ಫ್ರೆಂಡ್ ಗೆ ಪಾಠ ಕಲಿಸಲು ಸುಳ್ಳು ಅತ್ಯಾಚಾರದ ಕಥೆ ಕಟ್ಟಿದ್ದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
ಕಳೆದ ಮಂಗಳವಾರ ಯುವತಿ ತನ್ನ ಮನೆಯವರ ಬಳಿ ತನ್ನ ಮೇಲೆ ಮೂವರು ವ್ಯಕ್ತಿಗಳು ಅತ್ಯಾಚಾರ ನಡೆಸಿರುವುದಾಗಿ ಹೇಳಿಕೊಂಡಿದ್ದಳು. ಯುವತಿಯ ಹೇಳಿಕೆಯಿಂದ ಕಂಗಾಲಾದ ಪಾಲಕರು ಒಡನೆಯೇ ಹೈದರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವತಿಯ ಹೇಳಿಕೆಯಂತೆ ಓರ್ವ ರಿಕ್ಷಾ ಡ್ರೈವರ್ ಮತ್ತು ಇಬ್ಬರು ವ್ಯಕ್ತಿಗಳ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಆಕೆ ಅತ್ಯಾಚಾರ ನಡೆಯಿತು ಎನ್ನಲಾದ ಪ್ರದೇಶದಲ್ಲಿ ಪೊಲೀಸರಿಗೆ ಯಾವುದೇ ಕುರುಹುಗಳು ಲಭ್ಯವಾಗಿರಲಿಲ್ಲ. ಅಲ್ಲದೆ ಆಕೆಯನ್ನು ರಿಕ್ಷಾದಲ್ಲಿ ಅಪಹರಣ ಮಾಡಿದರು ಎನ್ನಲಾದ ಸ್ಥಳದಲ್ಲಿಯೂ ಪ್ರತ್ಯಕ್ಸದರ್ಶಿಗಳು ಸಿಕ್ಕಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಆಕೆಯ ವೈದ್ಯಕೀಯ ತಪಾಸಣೆ ವೇಳೆ ಅತ್ಯಾಚಾರ ನಡೆದಿರುವ ಸಂಬಂಧ ಗುರುತುಗಳು ಪತ್ತೆಯಾಗಿರಲಿಲ್ಲ. ಈ ಸಂದರ್ಭದಲ್ಲಿ ಪೊಲೀಸರಿಗೆ ಯುವತಿ ಮೇಲೆಯೆ ಅನುಮಾನ ಬಂದಿತ್ತು.
ಯುವತಿಯನ್ನು ಅಪಹರಣ ಮಾಡಿದ್ದಾರೆ ಎನ್ನಲಾದ ಸಮಯದ ಸಿಸಿ ಟಿವಿ ವಿಡಿಯೋಗಳನ್ನು ಪರಿಶೀಲಿಸಿದಾಗ ಯುವತಿ ತಾನೇ ಆಟೋ ಏರಿದ್ದು ಕಂಡುಬಂದಿತ್ತು. ಇಬ್ಬರು ವ್ಯಕ್ತಿಗಳು ಆಕೆಯನ್ನು ಬಲವಂತವಾಗಿ ಆಟೋದೊಳಗೆ ತಳ್ಳಿದರು ಎಂದು ಯುವತಿ ನೀಡಿದ್ದ ದೂರು ಸುಳ್ಳು ಎಂಬುದು ಪೊಲೀಸರಿಗೆ ಮನವರಿಕೆಯಾಯಿತು. ಈ ಸಂದರ್ಭದಲ್ಲಿ ಆಕೆಯನ್ನು ಠಾಣೆಗೆ ಕರೆಸಿ ಅವರದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಯುವತಿ ತಾನು ನೀಡಿದ ದೂರು ಸುಳ್ಳು ಎಂಬುದನ್ನು ಒಪ್ಪಿಕೊಂಡಳು.
ಯುವತಿಯ ಬಾಯ್ ಫ್ರೆಂಡ್ ಅಕೆಯನ್ನು ತೊರೆದು ಮತ್ತೊಬ್ಬ ಯುವತಿಯೊಂದಿಗೆ ಸ್ನೇಹ ಹೊಂದಿದ್ದ. ಇದರಿಂದಾಗಿ ಸಿಟ್ಟಿಗೆದ್ದ ಯುವತಿ ಆತನಿಗೆ ಪಾಠ ಕಲಿಸುವ ಸಲುವಾಗಿ, ಆತನಿಗೆ ಬೆದರಿಕೆಯೊಡ್ಡಲೆಂದು ಅತ್ಯಾಚಾರ ನಾಟಕವಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


