ಆ ಒಂದು ವಿಶೇಷ ಮಸೂದೆಗಾಗಿ ಅಪರೂಪದ ಆಡಳಿತ-ವಿಪಕ್ಷಗಳ ಒಗ್ಗಟ್ಟಿಗೆ ಸಾಕ್ಷಿಯಾಗಲಿದೆ ಸಂಸತ್!
ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಪರಿಣಾಮವಾಗಿ ಬಹುಪಾಲು ವ್ಯರ್ಥಗೊಳ್ಳುತ್ತಿರುವ ಸಂಸತ್ ನ ಮುಂಗಾರು ಅಧಿವೇಶನದ ಕಲಾಪ ಈ ವಾರ ಸುಗಮವಾಗಿ ನಡೆಯುವ ನಿರೀಕ್ಷೆ ಇದೆ.

ನವದೆಹಲಿ: ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಪರಿಣಾಮವಾಗಿ ಬಹುಪಾಲು ವ್ಯರ್ಥಗೊಳ್ಳುತ್ತಿರುವ ಸಂಸತ್ ನ ಮುಂಗಾರು ಅಧಿವೇಶನದ ಕಲಾಪ ಈ ವಾರ ಸುಗಮವಾಗಿ ನಡೆಯುವ ನಿರೀಕ್ಷೆ ಇದೆ.
ಈ ವಾರ ಸಂಸತ್ ನಲ್ಲಿ ಸಂವಿಧಾನಕ್ಕೆ 127 ನೇ ತಿದ್ದುಪಡಿ ಮಸೂದೆ- ಹಿಂದುಳಿದ ವರ್ಗಗಳನ್ನು ನೋಟಿಫೈ ಮಾಡುವುದಕ್ಕೆ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ನೀಡುವ ಮಸೂದೆ ಮಂಡನೆಯಾಗಲಿದ್ದು, ವಿಪಕ್ಷಗಳ ಸಂಪೂರ್ಣ ಬೆಂಬಲ ಸಿಗುವ ಸಾಧ್ಯತೆ ಇದೆ.
ಲೋಕಸಭೆ, ರಾಜ್ಯಸಭೆಗಳ ವಿಪಕ್ಷಗಳ ನಾಯಕರು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲಿದ್ದು ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಈ ಮಸೂದೆ ಅಂಗೀಕಾರಗೊಂಡ ಬಳಿಕ ಸರ್ಕಾರ ಸಂಸತ್ ಅಧಿವೇಶನವನ್ನು ಮುಕ್ತಾಯಗೊಳಿಸುವ ಸಾಧ್ಯತೆ ಇದ್ದು ಈ ವಿಷಯದ ಬಗ್ಗೆಯೂ ವಿಪಕ್ಷಗಳ ನಾಯಕರು ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಆ.13 ಕ್ಕೆ ಸಂಸತ್ ಅಧಿವೇಶನ ಮುಕ್ತಾಯಗೊಳ್ಳಬೇಕಿದೆ.
ಮುಂದಿನ ವರ್ಷದ ಪ್ರಾರಂಭದಲ್ಲಿ ವಿಧಾನಸಭಾ ಚುನಾವಣೆಗಳಿರುವ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳನ್ನು ನೋಟಿಫೈ ಮಾಡುವುದಕ್ಕೆ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ನೀಡುವ ಮಸೂದೆ ವಿಷಯವಾಗಿ ಎಲ್ಲಾ ವಿಪಕ್ಷಗಳೂ ಒಮ್ಮತದಲ್ಲಿದ್ದು
ಕಾಂಗ್ರೆಸ್ ಹಾಗೂ ಇನ್ನಿತರ ಪ್ರಾದೇಶಿಕ ಪಕ್ಷಗಳು- ಒಬಿಸಿಗಳ ಪಟ್ಟಿಯನ್ನು ಗುರುತಿಸುವ ಅಧಿಕಾರವನ್ನು ಸಂಪೂರ್ಣ ಕೇಂದ್ರಕ್ಕೇ ನೀಡಿದ್ದ ಮೇ.05 ರ ಸುಪ್ರೀಂ ಕೋರ್ಟ್ ನ ಆದೇಶವನ್ನು ಮಾರ್ಪಾಡು ಮಾಡಲು 102 ನೇ ಸಂವಿಧಾನದ ತಿದ್ದುಪಡಿಗೆ ಮರು ತಿದ್ದುಪಡಿ ಮಾಡುವುದಕ್ಕೆ ಆಗ್ರಹಿಸುತ್ತಿವೆ.
"ಈ ಮಸೂದೆ ಬಹಳ ಮುಖ್ಯವಾದದ್ದು ಹಾಗೂ ಚರ್ಚೆಯೇ ಇಲ್ಲದೇ ಅಂಗೀಕರಿಸಬಹುದಾದ ಮಸೂದೆ" ಎಂದು ವಿಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಇದೇ ವೇಳೆ ಪೆಗಾಸಸ್ ಕುರಿತ ಚರ್ಚೆಯ ಆಗ್ರಹದಿಂದ ವಿಪಕ್ಷಗಳು ಹಿಂದೆಸರಿಯುವ ಮಾತೇ ಇಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


