ಕೋವಿಡ್-19: ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರಗಳಿಗೆ ಸಹಕಾರ ನೀಡುವಂತೆ ಸೇನೆಗೆ ರಾಜನಾಥ್ ಸಿಂಗ್ ಸೂಚನೆ
ದೇಶದಾದ್ಯಂತ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರಗಳಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವಂತೆ ಮೂರೂ ಸೇನಾಪಡೆಗಳಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಸೂಚನೆ ನೀಡಿದ್ದಾರೆ.

ನವದೆಹಲಿ: ದೇಶದಾದ್ಯಂತ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರಗಳಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವಂತೆ ಮೂರೂ ಸೇನಾಪಡೆಗಳಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಸೂಚನೆ ನೀಡಿದ್ದಾರೆ.
ಈ ಕುರಿತು ರಕ್ಷಣಾ ಇಲಾಖೆಯ ಮೂಲಗಳು ಮಾಹಿತಿ ನೀಡಿದ್ದು, ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ರಾಜನಾಥ್ ಸಿಂಗ್ ಅವರು ಸೇನಾಪಡೆಗಳಿಗೆ ಸೂಚನೆ ನೀಡಿದ್ದು, ಈ ಸಂಬಂಧ ವಿವಿಧ ರಾಜ್ಯಗಳಲ್ಲಿರುವ ಸೇನಾ ಘಟಕಗಳು ಆಯಾ ರಾಜ್ಯ ಸರ್ಕಾರವನ್ನು ಸಂಪರ್ಕಿಸಿ, ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ನೆರವು ನೀಡುವಂತೆ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರಿಗೆ ನಿರ್ದೇಶಿಸಿದ್ದಾರೆಂದು ತಿಳಿದುಬಂದಿದೆ.
ರಾಜ್ಯ ಸರ್ಕಾರಗಳಿಗೆ ನೆರವು ನೀಡುವುದರ ಜೊತೆಗೆ ಸಾಧ್ಯವಾದಲ್ಲೆಲ್ಲಾ ಸೇನಾ ಆಸ್ಪತ್ರೆಗಳಲ್ಲಿ (ವೈದ್ಯಕೀಯ ಸೌಲಭ್ಯವಿದ್ದ ಕಡೆ) ನಾಗರಿಕರಿಗೆ ಚಿಕಿತ್ಸೆ ನೀಡಲು ಸೇನೆ ನಿರ್ಧರಿಸಿದೆ.
ಇದೇ ವೇಳೆ, ರಾಜ್ಯ ಗಳಿಗೆ ಯಾವ ರೀತಿಯ ನೆರವು ಬೇಕೆಂಬುದನ್ನು ತಿಳಿಯಲು ಹಿರಿಯ– ಉನ್ನತ ಸೇನಾಧಿಕಾರಿಯೊಬ್ಬರಿಗೆ ಆಯಾ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವರು ತಮ್ಮ ಸಚಿವಾಲಯದ ಪ್ರಮುಖ ಅಧಿಕಾರಿಗಳು ಹಾಗೂ ರಕ್ಷಣಾ ಕ್ಷೇತ್ರದ 3 ಪಡೆಗಳ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದು, ದೇಶದಾದ್ಯಂತ ಉಲ್ಬಣಗೊಳ್ಳುತ್ತಿರುವ ಕೊರೋನಾ ಪ್ರಕರಣಗಳನ್ನು ನಿರ್ವಹಿಸಲು, ಎಲ್ಲ ರಾಜ್ಯಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ.
ಇದೇ ವೇಳೆ ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಳಿಗೆ ಕೊರೋನಾ ಪ್ರಕರಣಗಳ ನಿರ್ವಹಣೆಗೆ ನೆರವು ನೀಡುವ ಸಂಬಂಧ ಸಿದ್ಧತೆ ನಡೆಸುವಂತೆ ಸೂಚಿಸಲಾಗಿದೆ.
ಈ ನಡುವೆ ಕೇಂದ್ರ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಅವರು, ರಾಜ್ಯ ಸರ್ಕಾರಗಳಿಗೆ ಸೇನಾ ಪಡೆಗಳು ಯಾವ ರೀತಿ ನೆರವು ನೀಡಬಹುದು ಎಂಬುದರ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ. ಆ ಪ್ರಕಾರ, ರಕ್ಷಣಾ ಸಚಿವಾಲಯ ದೇಶದಲ್ಲಿರುವ 67 ಸೇನಾ ಆಸ್ಪತ್ರೆಗಳಿಗೆ ಸೂಚನೆ ನೀಡಿ, ಆಯಾ ರಾಜ್ಯ ಸರ್ಕಾರಗಳಿಗೆ ನೆರವಾಗುವಂತೆ ತಿಳಿಸಿದ್ದಾರೆ.
ಕೋವಿಡ್ ನಿರ್ವಹಣೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಎಲ್ಲ ರಾಜ್ಯ ಸರ್ಕಾರಗಳಿಗೂ ನೆರವಾಗುವುದಾಗಿ ತಿಳಿಸಿದೆ.
ಈಗಾಗಲೇ ದೆಹಲಿಯ ವಿಮಾನ ನಿಲ್ದಾಣದ ಸಮೀಪ ಕೊರೋನಾ ಆರೈಕೆ ಕೇಂದ್ರವನ್ನು ಪುನರಾರಂಭಿಸಿದೆ. 250 ಹಾಸಿಗೆಗಳ ಸಾಮರ್ಥ್ಯವಿದ್ದ ಈ ಕೇಂದ್ರವನ್ನು 1 ಸಾವಿರ ಹಾಸಿಗೆಗಳ ಕೇಂದ್ರವಾಗಿ ಉನ್ನತೀಕರಿಸಿದೆ. ಲಖನೌದಲ್ಲೂ ಇಂತಹದ್ದೇ ಕೊರೋನಾ ಕೇರ್ ಕೇಂದ್ರವನ್ನು ಡಿಆರ್‌ಡಿಒ ಆರಂಭಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


