ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ: ರೈತರಿಗೆ ಪ್ರಧಾನಿ ಮೋದಿ ಭರವಸೆ
ಕೃಷಿ ಬೆಳೆಗಳ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪ್ರಧಾನಿ ಮೋದಿ ರೈತರಿಗೆ ಭರವಸೆ ನೀಡಿದ್ದಾರೆ.

ನವದೆಹಲಿ: ಕೃಷಿ ಬೆಳೆಗಳ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪ್ರಧಾನಿ ಮೋದಿ ರೈತರಿಗೆ ಭರವಸೆ ನೀಡಿದ್ದಾರೆ.
ಕೃಷಿ ವಲಯದ ಸುಧಾರಣೆಗಳಿಗೆ ಸಂಬಂಧಿಸಿದ ಎರಡು ಮಹತ್ವದ ವಿಧೇಯಕಗಳು ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ರೈತರನ್ನು ಅಭಿನಂದಿಸಿದ್ದಾರೆ. ಅಲ್ಲದೆ, ಕನಿಷ್ಟ ಬೆಂಬಲ ಬೆಲೆ( ಎಂಎಸ್ಪಿ) ಹಾಗೂ ಕೃಷಿ ಉತ್ಪನ್ನಗಳ ಸರ್ಕಾರಿ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ರಾಜ್ಯಸಭೆಯಲ್ಲಿ, ಹಲವು ಪ್ರತಿ ಪಕ್ಷಗಳ ಅಡ್ಡಿ ಅಡಚಣೆಗಳ ನಡುವೆಯೂ, ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ವಿಧೇಯಕ, 2020. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ವಿಧೇಯಕ 2020 ಅಂಗೀಕಾರ ಕೊಂಡ ನಂತರ ಪ್ರಧಾನಿ ಮೋದಿ ಈ ಸಂಬಂಧ ಸರಣಿ ಟ್ವೀಟ್ ಮಾಡಿದ್ದಾರೆ.
'ವಿಧೇಯಕಗಳನ್ನು ವಿರೋಧಿಸುತ್ತಿರುವ ರೈತರಿಗೆ ಈಗಿರುವ ಕನಿಷ್ಟ ಬೆಂಬಲ ಬೆಲೆ ಹಾಗೂ ಕೃಷಿ ಉತ್ಪನ್ನಗಳ ಸರ್ಕಾರಿ ಖರೀದಿ ವ್ಯವಸ್ಥೆ ಮುಂದುವರಿಯಲಿದೆ ಎಂಬುದನ್ನು ಈ ಮೊದಲು ಹೇಳಿದ್ದೆ, ಈಗಲೂ ಅದಕ್ಕೆ ಬದ್ಧ ಎಂದು ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರ ರೈತರ ಸೇವೆಗಾಗಿ ಅಧಿಕಾರದಲ್ಲಿದೆ. ರೈತರ ಮುಂದಿನ ತಲೆಮಾರುಗಳಿಗೂ ಉತ್ತಮ ಬದುಕು ಖಾತರಿಪಡಿಸಲು, ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
'ಭಾರತೀಯ ಕೃಷಿ ರಂಗದ ಇತಿಹಾಸದಲ್ಲಿ ಇದೊಂದು ಮಹತ್ವದ ದಿನವಾಗಿದ್ದು, ಇದರಿಂದ ಕೃಷಿ ವಲಯ ಹಾಗೂ ಕೋಟ್ಯಾಂತರ ಮಂದಿ ರೈತರ ಬದುಕು ಸಂಪೂರ್ಣ ಬದಲಾವಣೆಯನ್ನು ಖಾತ್ರಿಪಡಿಸಲಿದೆ. ನಮ್ಮ ಅನ್ನದಾತರಿಗೆ ನೆರವಾಗಲು, ಅವರ ಮುಂದಿನ ತಲೆಮಾರುಗಳಿಗೆ ಉತ್ತಮ ಜೀವನ ಕಲ್ಪಿಸಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುವುದು. ಈ ವಿಧೇಯಕಗಳಿಂದ ಕೃಷಿ ಕ್ಷೇತ್ರದ ಶ್ರಮಜೀವಿ ರೈತರಿಗೆ ಸಹಾಯ ಮಾಡಲು ಸಾಧ್ಯವಾಗಲಿದೆ. ಕೃಷಿ ವಲಯಕ್ಕೆ ಆಧುನಿಕ ತಂತ್ರಜ್ಞಾನ ಅಗತ್ಯವನ್ನು ಪೂರೈಸಿ. ರೈತರ ಭವಿಷ್ಯ ಹಸನುಗೊಳಿಸಲು ಪೂರಕವಾಗಲಿದೆ. ದಶಕಗಳಿಂದ, ಭಾರತೀಯ ರೈತ ಹಲವು ನಿರ್ಬಂಧಗಳಲ್ಲಿ ಬಂಧಿಯಾಗಿದ್ದಾನೆ. ಮಧ್ಯವರ್ತಿಗಳಿಂದ ಶೋಷಣೆಗೊಳಗಾಗಿದ್ದಾನೆ ಸಂಸತ್ತು ಅಂಗೀಕರಿಸಿರುವ ವಿಧೇಯಕಗಳು ರೈತರನ್ನು ಇಂತಹ ಸಂಕಷ್ಟಗಳಿಂದ ಮುಕ್ತಗೊಳಿಸಲಿವೆ, ರೈತರ ಆದಾಯ ದ್ವಿಗುಣಗೊಳಿಸುವ ಜೊತೆಗೆ ಸಮೃದ್ಧಿಯ ಬದುಕು ಖಾತ್ರಿಪಡಿಸಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


