ದೇಶ

ತ್ರಿಪುರಾ ಸರ್ಕಾರದಲ್ಲಿ ಬಿಕ್ಕಟ್ಟು: ರೆಬೆಲ್ ಶಾಸಕರಿಂದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭೇಟಿ

ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಬಿಜೆಪಿ ಸರ್ಕಾರದಲ್ಲಿ ಭುಗಿಲೆದ್ದ ಭಿನ್ನಮತಕ್ಕೆ ಸಂಬಂಧಿಸಿದಂತೆ ಸಿಎಂ ಬಿಪ್ಲಬ್ ದೇವ್ ವಿರುದ್ಧ ವಿರುದ್ಧ ತೊಡೆ ತಟ್ಟಿದ ಶಾಸಕರು ದಿಲ್ಲಿಗೆ ದೌಡಾಯಿಸಿ ಉನ್ನತ ನಾಯಕರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ತ್ರಿಪುರಾ ಸರ್ಕಾರದಲ್ಲಿ ಬಿಕ್ಕಟ್ಟು: ರೆಬೆಲ್ ಶಾಸಕರಿಂದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭೇಟಿ
ಸಿಎಂ ಬಿಪ್ಲಬ್ ದೇವ್
Published On :

ಅಗರ್ತಲಾ: ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಬಿಜೆಪಿ ಸರ್ಕಾರದಲ್ಲಿ ಭುಗಿಲೆದ್ದ ಭಿನ್ನಮತಕ್ಕೆ ಸಂಬಂಧಿಸಿದಂತೆ ಸಿಎಂ ಬಿಪ್ಲಬ್ ದೇವ್ ವಿರುದ್ಧ ವಿರುದ್ಧ ತೊಡೆ ತಟ್ಟಿದ ಶಾಸಕರು ದಿಲ್ಲಿಗೆ ದೌಡಾಯಿಸಿ ಉನ್ನತ ನಾಯಕರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ 4 ಶಾಸಕರ ತಂಡ ಇಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ತ್ರಿಪುರಾ ರಾಜಕೀಯ ಸ್ಥಿತಿಗತಿ ಮತ್ತು ಸರ್ಕಾರದ ನಡೆ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಬಿಪ್ಲಬ್ ದೇವ್ ಅವರ ನಿರ್ಧಾರಗಳಿಂದ ಬಿಜೆಪಿ ಸರ್ಕಾರಕ್ಕೆ ಧಕ್ಕೆಯಾಗುತ್ತಿದೆ ಎಂದೂ  ದೂರಿದ್ದಾರೆ. ಅಲ್ಲದೆ ಸಮರ್ಥ ಸರ್ಕಾರ ನೀಡುವಲ್ಲಿ ಬಿಪ್ಲಬ್‌ ವಿಫಲಗೊಂಡಿದ್ದಾರೆ. ಸಿಎಂ ಗಾದಿಯಿಂದ ಅವರನ್ನು ತಕ್ಷಣವೇ ಕೆಳಗಿಳಿಸಬೇಕು. ಇಲ್ಲದೇ ಹೋದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲು ಉಂಟಾಗಲಿದೆ ಎಂದು ಎಂದು ತಿಳಿದುಬಂದಿದೆ.

ಇನ್ನು ನಡ್ಡಾ ಭೇಟಿ ವೇಳೆ ಚರ್ಚೆಗೆ ಬಂದ ವಿಚಾರಗಳ ಕುರಿತು ತಿಳಿದುಬಂದಿಲ್ಲವಾದರೂ, ಸಿಎಂ ಬಿಪ್ಲಬ್ ದೇವ್ ಅವರ ವಿರುದ್ಧ ಶಾಸಕರು ಹಲವು ವಿಚಾರಗಳ ಕುರಿತು ಅಸಮಾಧಾನಗೊಂಡಿರುವ ವಿಚಾರದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಭೇಟಿ ಬಳಿಕ ಸುದ್ದಿಗಾರರೊಂದಿಗೆ  ಮಾತನಾಡಿದ ರೆಬೆಲ್ ಶಾಸಕರ ಪೈಕಿ ಓರ್ವರಾದ ರಾಮ್ ಪ್ರಸಾದ್ ಪೌಲ್ ಅವರು, ಜೆಪಿ ನಡ್ಡಾ ಅವರೊಂದಿಗೆ ನಡೆದ ಚರ್ಚೆ ಕುರಿತ ಫಲಿತಾಂಶ ದುರ್ಗಾ ಪೂಜೆ ಹಬ್ಬದ ಬಳಿಕ ತಿಳಿಯಲಿದೆ ಎಂದು ಮಾರ್ಮಿಕವಾಗಿ ಹೇಳಿದರು. 'ಆದರೆ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ನಾವು ಯಾರ ವಿರುದ್ಧವೂ  ದೂರು ನೀಡಲು ಇಲ್ಲಿಗೆ ಆಗಮಿಸಿಲ್ಲ. ಆದರೆ ತ್ರಿಪುರಾ ರಾಜ್ಯದ ಸ್ಥಿತಿಗತಿ ಕುರಿತು ಕೇಂದ್ರ ನಾಯಕರಿಗೆ ಮಾಹಿತಿ ನೀಡಬೇಕಿತ್ತು. ಅದು ನಮ್ಮ ಕರ್ತವ್ಯ ಕೂಡ. ರಾಜ್ಯದಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆ ಮತ್ತು ಸರ್ಕಾರದ ತೀರ್ಮಾನಗಳ ಕುರಿತು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಕೆಲವು  ನಾಯಕರ ನಡೆಯಿಂದಾಗಿ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ಕುರಿತಂತೆ ನಡ್ಡಾ ಅವರಿಗೆ ಮನವಿ ಪತ್ರ ನೀಡಿದ್ದೇವೆ ಎಂದು ಪೌಲ್ ಹೇಳಿದ್ದಾರೆ.

ರೆಬೆಲ್ ಶಾಸಕರ ನಾಯಕ ಎಂದು ಹೇಳಲಾಗುತ್ತಿರುವ ಶಾಸಕ ಸುದೀಪ್‌ ರಾಯ್‌ ಬರ್ಮನ್‌ ಅವರು ಬಿಜೆಪಿಯ 36 ಶಾಸಕರಲ್ಲಿ 25 ಮಂದಿ ಬಿಪ್ಲಬ್‌ ಆಡಳಿತದ ವಿಷಯದಲ್ಲಿ ಅಸಮಾಧಾನ ತಳೆದಿದ್ದಾರೆ. ನಾಯಕತ್ವ ಬದಲಾಗಬೇಕು ಎನ್ನುವುದು ನಮ್ಮ ಒತ್ತಾಯ. ಆ ಮೂಲಕ ಮುಂದಿನ ಚುನಾವಣೆಯಲ್ಲಿ  ಸರ್ಕಾರವನ್ನು ಉಳಿಸಿಕೊಳ್ಳುವ ಒತ್ತಾಸೆ ನಮ್ಮದು ಎಂದು ಹೇಳಿದ್ದಾರೆ ಎನ್ನಲಾಗಿದೆ. 

ಇನ್ನು ಜೆ.ಪಿ.ನಡ್ಡಾ ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕೂಡ ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ ವಿವರ ನೀಡಲು ಶಾಸಕರ ಬಣ ತೀರ್ಮಾನಿಸಿದೆ. ನಡ್ಡಾ ಭೇಟಿಗೆ ಭಾನುವಾರದಿಂದಲೇ ಭಿನ್ನರು ದಿಲ್ಲಿಯಲ್ಲಿ ಠಿಕಾಣಿ ಹೂಡಿದ್ದಾರೆ ಎನ್ನಲಾಗಿದೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.