ದೇಶ

ಆಸ್ಟ್ರಾಜೆನಿಕಾ- ಆಕ್ಸ್ಫರ್ಡ್ ಕೋವಿಡ್-19 ಲಸಿಕೆ ವಿವಾದಕ್ಕೆ ಗುರಿ: ಮಹತ್ವದ ಮಾಹಿತಿ ಮರೆಮಾಚಿದ ಸಂಸ್ಥೆ!?

ಕೋವಿಡ್-19 ರುದ್ರನರ್ತನ ಮುಂದುವರೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಹಾಗೂ ಭಾರತದ ಪಾಲಿಗೆ ಆಶಾಕಿರಣವಾಗಿದ್ದ ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ ಸಂಸ್ಥೆ ತಯಾರಿಸುತ್ತಿದ್ದ ಕೋವಿಡ್-19 ಲಸಿಕೆ ವಿವಾದಕ್ಕೆ ಗುರಿಯಾಗಿದೆ.

ಆಸ್ಟ್ರಾಜೆನಿಕಾ- ಆಕ್ಸ್ಫರ್ಡ್ ಕೋವಿಡ್-19 ಲಸಿಕೆ ವಿವಾದಕ್ಕೆ ಗುರಿ: ಮಹತ್ವದ ಮಾಹಿತಿ ಮರೆಮಾಚಿದ ಸಂಸ್ಥೆ!?
ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ ಕೋವಿಡ್-19 ಲಸಿಕೆ ವಿವಾದಕ್ಕೆ ಗುರಿ: ಮಹತ್ವದ ಮಾಹಿತಿ ಮರೆಮಾಚಿದ ಸಂಸ್ಥೆ!?
Published On :

ನವದೆಹಲಿ: ಕೋವಿಡ್-19 ರುದ್ರನರ್ತನ ಮುಂದುವರೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಹಾಗೂ ಭಾರತದ ಪಾಲಿಗೆ ಆಶಾಕಿರಣವಾಗಿದ್ದ ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ ಸಂಸ್ಥೆ ತಯಾರಿಸುತ್ತಿದ್ದ ಕೋವಿಡ್-19 ಲಸಿಕೆ ವಿವಾದಕ್ಕೆ ಗುರಿಯಾಗಿದೆ. 

ಸರಳವಾಗಿ ಹೇಳುವುದಾದರೆ, ಮಾನವ ಪ್ರಯೋಗದ ವೇಳೆ ಹಲವು ಪ್ರಮಾದಗಳು ನಡೆದಿದ್ದು, ಇನ್ನೂ ಹಲವು ಮಹತ್ವದ ಮಾಹಿತಿಯನ್ನು ಮರೆಮಾಚಿ ತಮ್ಮ ಸಂಸ್ಥೆಯ ಲಸಿಕೆ ಅತ್ಯಂತ ಪರಿಣಾಮಕಾರಿ ಎನ್ನುವುದನ್ನು ತೋರಿಸುವ ಪ್ರಯತ್ನ ನಡೆದಿದೆ ಎಂಬುದು ಲಸಿಕೆ ಹಾಗೂ ಸಂಸ್ಥೆಗಳ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪ.

ಎರಡು ಭಿನ್ನ ಡೋಸೇಜ್ ಪ್ರಿಸ್ಕ್ರಿಪ್ಷನ್ ನ್ನು ಪಾಲನೆ ಮಾಡಲಾಗಿದ್ದು, ಮಾನವ ಪ್ರಯೋಗದ ಅಂಕಿ-ಅಂಶಗಳನ್ನು ತಪ್ಪಾಗಿ ಸಾರ್ವಜನಿಕರ ಅವಗಾಹನೆಗೆ ತರಲಾಗಿರುವುದು ಬೆಳಕಿಗೆ ಬಂದಿದೆ.

ಹಿರಿಯ ನಾಗರಿಕರ ಮೇಲೆ ಇದು ಅತ್ಯಂತ ಯಶಸ್ವಿಯಾಗಿ ಪರಿಣಾಮ ಬೀರಿದೆ ಎಂದು ಹೇಳಲಾಗಿತ್ತಾದರೂ, ಸ್ಯಾಂಪಲ್ ಸಂಖ್ಯೆಯೇ ಅತ್ಯಂತ ಕಡಿಮೆ, ಆದ್ದರಿಂದ ಇದು ವಿಶ್ವಾಸಾರ್ಹವಲ್ಲ ಎಂಬ ಆಕ್ಷೇಪಣೆಯೂ ಕೇಳಿಬಂದಿದೆ. ಇದಿಷ್ಟೇ ಅಲ್ಲದೇ ಸ್ಯಾಂಪಲ್ ಗಳಿಗೆ ಬಳಕೆ ಮಾಡಲಾದ ಲಸಿಕೆ ಪ್ರಮಾಣದಲ್ಲೂ ವ್ಯತ್ಯವಾಗಿದ್ದು ಪಾರದರ್ಶಕತೆ ಕಾಯ್ದುಕೊಳ್ಳದೇ ಇರುವುದೂ ಬಹಿರಂಗಗೊಂಡಿದೆ.

ಸ್ವೀಡಿಶ್-ಬ್ರಿಟೀಷ್ ಫಾರ್ಮಸಿಯಾಗಿರುವ ಆಸ್ಟ್ರಾಜೆನಿಕಾ ಸೋಮವಾರದಂದು ಬಿಡುಗಡೆ ಮಾಡಿದ್ದ ಪತ್ರಿಕಾ ವರದಿಯಲ್ಲಿ ಈ ಕೊರೋನಾ ಲಸಿಕೆ ಸರಾಸರಿ ಶೇ.70 ರಷ್ಟು ಪರಿಣಾಮಕಾರಿ ಎಂದು ಹೇಳಿಕೊಂಡಿತ್ತು.

ಕ್ಲಿನಿಕಲ್ ಟ್ರಯಲ್ ಗಳ ವೇಳೆ ನೀಡಲಾಗಿದ್ದ ಡೋಸ್ ಗಳ ವ್ಯತ್ಯಯ ವಿಶ್ವಾದ್ಯಂತ ವಿಜ್ಞಾನಿಗಳನ್ನು ಗೊಂದಲಕ್ಕೀಡುಮಾಡಿತ್ತು. ಆದರೂ ಈ ಬಗ್ಗೆ ಯಾವುದೇ ವಿವರಣೆಗಳನ್ನೂ ನೀಡಲಾಗಿರಲಿಲ್ಲ.

ಅತ್ಯಂತ ಹೆಚ್ಚು ಪರಿಣಾಮಕಾರಿ ಎಂದು ಹೇಳಲಾಗಿದ್ದ ಡೋಸ್ ಹಾಗೂ ಇನ್ನು ಕೆಲವು ಜನರಿಗೆ ನೀಡಲಾಗಿದ್ದ ಅರ್ಧ ಡೋಸ್ ಗಳು ಕೆಲವು ಬಾಟಲ್ ಗಳಲ್ಲಿ ತಪ್ಪಾಗಿ ತುಂಬಿಸಲಾಗಿದ್ದ ಪ್ರಮಾಣದ್ದಾಗಿತ್ತು ಎಂಬ ಮಾಹಿತಿಯೂ ಈಗ ಬಹಿರಂಗಗೊಂಡಿದೆ. ಆದರೆ ಸೋಮವಾರದ ಪತ್ರಿಕಾಗೋಷ್ಠಿಯಲ್ಲಿ ಇದ್ಯಾವುದನ್ನೂ ಸಂಸ್ಥೆ ಬಹಿರಂಗಪಡಿಸದೇ ಇದ್ದ ಕಾರಣ ಈಗ ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆಯ ಪ್ರಶ್ನೆ ಎದುರಾಗಿದೆ.

ಈ ಲಸಿಕೆಯನ್ನು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದಲ್ಲಿ ತಯಾರಿಸುತ್ತಿರುವುದರಿಂದ ಈಗ ಉದ್ಭವವಾಗಿರುವ ಪ್ರಶ್ನೆಗಳಿಂದ ಉಂಟಾಗುವ ಪರಿಣಾಮವನ್ನು ಭಾರತವೂ ಸ್ವಲ್ಪಮಟ್ಟಿಗೆ ಎದುರಿಸಬೇಕಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.