ದೇಶ

ನಿವಾರ್ ಚಂಡಮಾರುತ: ಚೆನ್ನೈನಲ್ಲಿ ವಿಮಾನ ಸಂಚಾರ ರದ್ದು; ತಮಿಳುನಾಡಿನ 7 ಜಿಲ್ಲೆಗಳಲ್ಲಿ ಬಸ್ ಸೇವೆ ಸ್ಥಗಿತ

ನಿವಾರ್ ಚಂಡಮಾರುತ ಬುಧವಾರ ರಾತ್ರಿ 8 ಗಂಟೆ ವೇಳೆಗೆ ತಮಿಳುನಾಡಿನ ಕರಾವಳಿ ಮೇಲೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೆ, ನಿವಾರ್ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ನಿವಾರ್ ಚಂಡಮಾರುತ: ಚೆನ್ನೈನಲ್ಲಿ ವಿಮಾನ ಸಂಚಾರ ರದ್ದು; ತಮಿಳುನಾಡಿನ 7 ಜಿಲ್ಲೆಗಳಲ್ಲಿ ಬಸ್ ಸೇವೆ ಸ್ಥಗಿತ
ಚೆನ್ನೈನಲ್ಲಿ ರಸ್ತೆಗಳು ಮಳೆ ನೀರಿನಿಂದ ಆವೃತವಾಗಿರುವ ದೃಶ್ಯ.
Published On :

ನವದೆಹಲಿ: ನಿವಾರ್ ಚಂಡಮಾರುತ ಬುಧವಾರ ರಾತ್ರಿ 8 ಗಂಟೆ ವೇಳೆಗೆ ತಮಿಳುನಾಡಿನ ಕರಾವಳಿ ಮೇಲೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೆ, ನಿವಾರ್ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 

ಮಂಗಳವಾರ ರಾತ್ರಿಯೇ ನಿವಾರ್ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದೆ. ಬುಧವಾರ ಅದು ತಮಿಳುನಾಡು ಮತ್ತು ಪುದುಚೇರಿಯನ್ನು ಕಾರೈಕಲ್ ಮತ್ತು ಮಾಮಲ್ಲಪುರಂ ನಡುವೆ ಹಾದು ಹೋಗಲಿದೆ. 

ಈ ವೇಳೆಗೆ ಗಂಟೆಗೆ 120-130 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ಹಿನ್ನೆಲೆಯಲ್ಲಿ ಮೂರು ರಾಜ್ಯಗಳಲ್ಲಿ ಭಾರೀ ಮಳೆಯ ಸಾಧ್ಯತೆಗಳಿವೆ. ಹೀಗಾಗಿ ಯಾರೂ ಕೂಡ ಮೀನುಗಾರಿಕೆಗೆ, ಮೋಟಾರ್ ಬೋಟ್ಸ್ ಸೇರಿ ಇನ್ನಿತರೆ ಚಟುವಟಿಕೆಗಳಿಗಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ತಮಿಳುನಾಡಿನಲ್ಲಿ ಮಂಗಳವಾರದಿಂದಲೇ ಮಳೆಯಾಗುತ್ತಿದ್ದು, ಚಂಡಮಾರುತದ ಹಿನ್ನೆಲೆಯಲ್ಲಿ ಬುಧವಾರ ರಜೆ ಘೋಷಿಸಲಾಗಿದೆ. ಅಲ್ಲದೆ 7 ಜಿಲ್ಲೆಗಳಲ್ಲಿ ಬಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳಿ ತಿಳಿಸಿವೆ.

ಈ ನಡುವೆ ಚಂಡಮಾರುತದ ಸವಾಲುಗಳನ್ನು ಎದುರಿಸಲು ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 1200 ಸಿಬ್ಬಂದಿ ಸಜ್ಜಾಗಿದ್ದಾರೆ. ಇತರೆ 800 ಹೆಚ್ಚುವರಿ ಮಂದಿ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಮತ್ತೊಂದೆಡೆ ಬುಧವಾರ ಆಂಧ್ರಪ್ರದೇಶದ ಮೇಲೆ ಗತಿ ಚಂಡಮಾರುತ ಕೂಡ ದಾಳಿ ನಡೆಸಲಿದೆ. 

ಚಂಡಮಾರುತ ಹಿನ್ನೆಲೆ: ಚೆನ್ನೈ ಮಾರ್ಗದ 12 ವಿಮಾನಗಳ ಸಂಚಾರ ರದ್ದು
‘ನಿವಾರ್’ ಚಂಡಮಾರುತ ಹಿನ್ನೆಲೆಯಲ್ಲಿ ಚೆನ್ನೈಯಿಂದ ನಿರ್ಗಮಿಸುವ ಮತ್ತು ಚೆನ್ನೈಗೆ ಹೋಗುವ 12 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.

ಚೆನ್ನೈನಿಂದ ನಿರ್ಗಮಿಸಬೇಕಿದ್ದ ಆರು ವಿಮಾನಗಳು ಮತ್ತು ಚೆನ್ನೈಗೆ ಆಗಮಿಸಬೇಕಿದ್ದ ಆರು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಕಣ್ಣೂರು, ಕೊಜಿಕೋಡ್, ವಿಜಯವಾಡ, ತಿರುಚಿ, ತೂತ್ತುಕುಡಿ, ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿ ವಿಮಾನಗಳ ಸಂಚಾರ ಸದ್ಯ ರದ್ದಾಗಿದೆ.

‘ನಿವಾರ್’ ಚಂಡಮಾರುತ: ತಮಿಳುನಾಡು, ಪಾಂಡಿಚೆರಿಯಲ್ಲಿ ಸೇನೆಯಿಂದ 12 ಎಚ್‌ಎಡಿಆರ್ ತಂಡಗಳ ನಿಯೋಜನೆ
ಬುಧವಾರ ರಾತ್ರಿ ಕರಾವಳಿಯನ್ನು ದಾಟಲಿರುವ ‘ನಿವಾರ್’ ಚಂಡಮಾರುತವನ್ನು ನಿಭಾಯಿಸಲು ತಮಿಳುನಾಡು ಮತ್ತು ಪುದುಚೆರಿ ಸರ್ಕಾರಗಳಿಗೆ ಸಹಾಯ ಮಾಡಲು ಭಾರತೀಯ ಸೇನೆ ಸಿದ್ಧವಾಗಿದೆ.

ಚಂಡಮಾರುತ ಎದುರಿಸಲು 12 ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ತಂಡಗಳು ಮತ್ತು ಎರಡು ಎಂಜಿನಿಯರ್ ಕಾರ್ಯಪಡೆ ತಂಡಗಳನ್ನು ನಿಯೋಜಿಸಲು ಸೇನೆ ಸಿದ್ಧವಾಗಿದೆ ಎಂದು ರಕ್ಷಣಾ ಇಲಾಖೆಯ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.