'ಸಿಕ್ಕಿಂ ಪ್ರತ್ಯೇಕ ರಾಷ್ಟ್ರ' ಜಾಹೀರಾತು, ಹಿಂತೆಗೆದುಕೊಂಡು ಅಧಿಕಾರಿ ಅಮಾನತುಗೊಳಿಸಿದ ಕೇಜ್ರಿವಾಲ್!
ಸಿಕ್ಕಿಂ ಭಾರತದ ಭಾಗವಲ್ಲ ಎಂದು ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತು ವಿವಾದ ಸೃಷ್ಟಿಯಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅದಕ್ಕೆ ಸ್ಪಷ್ಟನೆ ನೀಡಿ ನಾಗರಿಕ ರಕ್ಷಣೆ ಇಲಾಖೆ ಮಹಾ ನಿರ್ದೇಶಕರನ್ನು ಅಮಾನತು ಮಾಡಿದ ಘಟನೆ ನಡೆದಿದೆ.

ನವದೆಹಲಿ: ಸಿಕ್ಕಿಂ ಭಾರತದ ಭಾಗವಲ್ಲ ಎಂದು ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತು ವಿವಾದ ಸೃಷ್ಟಿಯಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅದಕ್ಕೆ ಸ್ಪಷ್ಟನೆ ನೀಡಿ ನಾಗರಿಕ ರಕ್ಷಣೆ ಇಲಾಖೆ ಮಹಾ ನಿರ್ದೇಶಕರನ್ನು ಅಮಾನತು ಮಾಡಿದ ಘಟನೆ ನಡೆದಿದೆ.
ಸಿಕ್ಕಿಂ ಭಾರತದ ಅವಿಭಾಜ್ಯ ಅಂಗ. ಇಂತಹ ತಪ್ಪುಗಳನ್ನು ಸಹಿಸಲು, ಮನ್ನಿಸಲು ಸಾಧ್ಯವಿಲ್ಲ. ಜಾಹೀರಾತನ್ನು ಹಿಂತೆಗೆದುಕೊಳ್ಳಲಾಗಿದ್ದು ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಪ್ರಮುಖ ಪತ್ರಿಕೆಗಳಲ್ಲಿ ನಿನ್ನೆ ಈ ಜಾಹೀರಾತು ಪ್ರಕಟವಾಗಿತ್ತು. ಅದರಲ್ಲಿ ನಾಗರಿಕ ರಕ್ಷಣಾ ಪಡೆಗೆ ಕಾರ್ಯಕರ್ತರು ಸೇರುವಂತೆ ಕರೆ ನೀಡಲಾಗಿತ್ತು. ಇದಕ್ಕೆ ಸೇರಲಿಚ್ಛಿಸುವವರಿಗೆ ಅರ್ಹತೆಗಳೇನೇನು ಎಂದು ಪಟ್ಟಿ ಮಾಡಿದ ಸ್ಥಳದಲ್ಲಿ ಸಿಕ್ಕಿಂನ್ನು ವಿದೇಶ ಎಂದು ವರ್ಗಾಯಿಸಲಾಗಿತ್ತು. ಭಾರತೀಯ ಪ್ರಜೆಯಾಗಬೇಕಾಗಿದ್ದು ಭೂತಾನ್, ನೇಪಾಳ ಮತ್ತು ಸಿಕ್ಕಿಂ ನ ಪ್ರಜೆಗಳು ಅಥವಾ ದೆಹಲಿಯ ನಿವಾಸಿಗಳು ಎಂದು ಜಾಹೀರಾತಿನಲ್ಲಿ ಪ್ರಕಟವಾಗಿತ್ತು.
ಇದು ಪ್ರಕಟವಾಗಿ ಸುದ್ದಿಯಾಗುತ್ತಿದ್ದಂತೆ ಸಿಕ್ಕಿಂ ಸರ್ಕಾರ ದೆಹಲಿ ಸರ್ಕಾರಕ್ಕೆ ಕೂಡಲೇ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸಿತ್ತು.
ನಾಗರಿಕ ರಕ್ಷಣಾ ಪಡೆಗೆ ಸೇರಲಿಚ್ಛಿಸುವ ಕಾರ್ಯಕರ್ತರ ಗಮನಕ್ಕೆ, ಸಿಕ್ಕಿಂನ್ನು ಭೂತಾನ್ ಜೊತೆ ಸೇರಿಸಲಾಗಿದ್ದು ಮತ್ತು ನೇಪಾಳವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಲಾಗಿದೆ. ಇದು ಸಿಕ್ಕಿಂ ಜನತೆಯ ಭಾವನೆಗಳಿಗೆ ತೀವ್ರ ನೋವನ್ನುಂಟುಮಾಡಿದೆ. ಭಾರತ ದೇಶದ ಪ್ರಜೆಗಳಾಗಿರುವುದಕ್ಕೆ ಅವರಿಗೆ ಹೆಮ್ಮೆಯಿದೆ ಎಂದು ಸಿಕ್ಕಿಂ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್ ಸಿ ಗುಪ್ತಾ ದೆಹಲಿ ಸರ್ಕಾರಕ್ಕೆ ಬರೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕೂಡ ದೆಹಲಿ ಸರ್ಕಾರದ ವಿರುದ್ಧ ಅನೇಕರು ಕಮೆಂಟ್ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಟ್ವೀಟ್ ಮಾಡಿದ್ದಾರೆ.
ದೆಹಲಿ ಸರ್ಕಾರದ ಆಡಳಿತ ವಿವಾದಿತ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಆದೇಶ ಹೊರಡಿಸಿದೆ.
ಸಿಕ್ಕಿಂ ಭಾರತದ 8 ಈಶಾನ್ಯ ರಾಜ್ಯಗಳಲ್ಲಿ ಒಂದಾಗಿದ್ದು ವಿಶಿಷ್ಟ ಭೂಪ್ರದೇಶವನ್ನು ಹೊಂದಿದೆ. ಭಾರತದ ಪ್ರಮುಖ ಪ್ರವಾಸಿ ಸ್ಥಳವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


