ಕರ್ನಾಟಕ ಪ್ರವೇಶಕ್ಕೆ ನಿರಾಕರಣೆ: 70ರ ವೃದ್ಧೆ ಸಾವು, ಆ್ಯಂಬುಲೆನ್ಸ್ ನಲ್ಲೆ ಹೆರಿಗೆ
ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಮೊಮ್ಮಗಳ ಮನೆಯಲ್ಲಿದ್ದ ಬಂಟ್ವಾಳ ನಿವಾಸಿ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಕರೆತಂದಿದ್ದ ಆಂಬುಲೆನ್ಸ್‌ಗೆ ಶನಿವಾರ ಪೊಲೀಸರು ರಾಜ್ಯದ ಗಡಿ ಪ್ರವೇಶಿಸಲು ತಡೆಯೊಡ್ಡಿದ್ದು, ವಾಪಸ್ ತೆರಳಿದ್ದ ರೋಗಿ ಅಲ್ಲಿಯೇ ಮೃತಪಟ್ಟಿದ್ದಾರೆ

ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಮೊಮ್ಮಗಳ ಮನೆಯಲ್ಲಿದ್ದ ಬಂಟ್ವಾಳ ನಿವಾಸಿ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಕರೆತಂದಿದ್ದ ಆಂಬುಲೆನ್ಸ್‌ಗೆ ಶನಿವಾರ ಪೊಲೀಸರು ರಾಜ್ಯದ ಗಡಿ ಪ್ರವೇಶಿಸಲು ತಡೆಯೊಡ್ಡಿದ್ದು, ವಾಪಸ್ ತೆರಳಿದ್ದ ರೋಗಿ ಅಲ್ಲಿಯೇ ಮೃತಪಟ್ಟಿದ್ದಾರೆ.
ಕಾಸರಗೋಡಿನಿಂದ ಹತ್ತಿರದ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಾಂಬುಲೆನ್ಸ್ ಅನ್ನು ಕರ್ನಾಟಕ ಪೊಲೀಸರು ತಲಪಾಡಿ ಗಡಿ ದಾಟಲು ಅನುಮತಿಸಲಿಲ್ಲ ಎಂದು ಆರೋಪಿಸಲಾಗಿದೆ.
ಮೃತ ಮಹಿಳೆ ಮಂಜೇಶ್ವರ ತಾಲ್ಲೂಕಿನ ಉದ್ಯಾವರ ಮಾಡ ಎಂಬಲ್ಲಿರುವ ತನ್ನ ಮೊಮ್ಮಗಳ ಮನೆಗೆ ತರೆಳಿದ್ದರು. ಶನಿವಾರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದಿದ್ದರು. ಅಲ್ಲಿಯೇ ಚಿಕಿತ್ಸೆ ಕೊಡಿಸಲು ಕುಟುಂಬದ ಸದಸ್ಯರು ಶನಿವಾರ ಸಂಜೆ ಆಂಬುಲೆನ್ಸ್‌ನಲ್ಲಿ ಮಂಗಳೂರಿನತ್ತ ಕರೆತಂದಿದ್ದರು.
ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಕೇರಳ ರಾಜ್ಯವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಪ್ರಯಾಣಿಕ ವಾಹನ ಸಂಚಾರ ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಸಾಗಿಸುವ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆಂಬುಲೆನ್ಸ್‌ಗಳನ್ನೂ ದಕ್ಷಿಣ ಕನ್ನಡ ಜಿಲ್ಲೆಯೊಳಕ್ಕೆ ಬಿಡುತ್ತಿಲ್ಲ. ಪಾತುಞಿ ಅವರನ್ನು ಕರೆ ತಂದ ಆಂಬುಲೆನ್ಸ್ ಅನ್ನು ತಲಪಾಡಿ ಗಡಿಯಲ್ಲಿ ತಡೆದ ಪೊಲೀಸರು, ವಾಪಸ್ ಕಳುಹಿಸಿದ್ದರು. ಬೇರೆ ಮಾರ್ಗಗಳಲ್ಲಿ ಮಂಗಳೂರಿಗೆ ಬರಲು ಆಂಬುಲೆನ್ಸ್ ಚಾಲಕ ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಬಳಿಕ ರೋಗಿಯನ್ನು ಮಾಡದಲ್ಲಿರುವ ಮೊಮ್ಮಗಳ ಮನೆಗೆ ವಾಪಸ್ ಕರೆದೊಯ್ಯಲಾಗಿತ್ತು. ಭಾನುವಾರ ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ.
ಕುಂಜತ್ತೂರಿನಲ್ಲಿ ವಾಸವಿರುವ ಬಿಹಾರ ಪಾಟ್ನಾ ಮೂಲದ ಗುರಿಯಾ ದೇವಿ ಎಂಬ ಗರ್ಭಿಣಿಗೆ ಶುಕ್ರವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಆ್ಯಂಬುಲೆನ್ಸ್ ನಲ್ಲಿ ಹೆರಿಗೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲು ತಲಪಾಡಿ ತಲುಪಿದಾಗ ಅಲ್ಲಿದ್ದ ಪೊಲೀಸರು ತಡೆದರು. ಎಷ್ಟೇ ಮನವಿ ಮಾಡಿಕೊಂಡರು ಅವರು ಅವಕಾಶ ನೀಡಲಿಲ್ಲ. ಆ ಬಳಿಕ 35 ಕಿಲೋ ಮೀಟರ್ ದೂರದ ಕಾಸರಗೋಡು ಜನರಲ್ ಆಸ್ಪತ್ರೆ ಗೆ ದಾಖಲಿಸಲು ಕೊಂಡೊಯ್ಯುವಷ್ಟರಲ್ಲಿ ಮೊಗ್ರಾಲ್ ತಲುಪುತ್ತಿದ್ದಂತೆ ಗುರಿಯಾ ಹೆಣ್ಣು ಮಗುವಿಗೆ ಹೆರಿಗೆ ಆಗಿದೆ ಎಂದು ಅಂಬ್ಯುಲೆನ್ಸ್ ಚಾಲಕ ಅಸ್ಲಮ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


