ತಿಮ್ಮಪ್ಪನಿಗೂ ಕೊರೋನಾ ಎಫೆಕ್ಟ್: ಸೋಂಕಿತನಿಂದ ದೇಗುಲ ಪ್ರವೇಶ, ಭಕ್ತರು ವಾಪಸ್, ತಿರುಮಲ ಬಂದ್?
ವಿಶ್ವದ ಶ್ರೀಮಂತ ದೇಗುಲ ಮತ್ತು ಖ್ಯಾತ ಪವಿತ್ರ ಯಾತ್ರಾ ಸ್ಥಳ ತಿರುಪತಿ ತಿರುಮಲದಲ್ಲೂ ಕೊರೋನಾ ಭೀತಿ ಆರಂಭವಾಗಿದ್ದು, ಕೊರೋನಾ ಸೋಂಕಿತ ವ್ಯಕ್ತಿ ದೇಗುಲ ಭೇಟಿ ನೀಡಿದ್ದ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ಮತ್ತು ಖ್ಯಾತ ಪವಿತ್ರ ಯಾತ್ರಾ ಸ್ಥಳ ತಿರುಪತಿ ತಿರುಮಲದಲ್ಲೂ ಕೊರೋನಾ ಭೀತಿ ಆರಂಭವಾಗಿದ್ದು, ಕೊರೋನಾ ಸೋಂಕಿತ ವ್ಯಕ್ತಿ ದೇಗುಲ ಭೇಟಿ ನೀಡಿದ್ದ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.
ಈ ಕುರಿತಂತೆ ಸುದ್ದಿಮಾಧ್ಯಮಗಳು ವರದಿ ಮಾಡಿದ್ದು, ಮಾಧ್ಯಮಗಳ ವರದಿಯನ್ವಯ ಮಹಾರಾಷ್ಟ್ರ ಮೂಲದ ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ತನ್ನ ಕುಟುಂಬದೊಂದಿಗೆ ತಿರುಮಲ ದೇಗುಲಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ದರ್ಶನಕ್ಕೆ ತೆರಳಿದ್ದಾಗ ಸೋಂಕಿತನ ಆರೋಗ್ಯ ಗಂಭೀರವಾಗಿದ್ದು, ಕೂಡಲೇ ಆತನನ್ನು ಆ್ಯಂಬುಲೆನ್ಸ್ ಮೂಲಕವಾಗಿ ಟಿಟಿಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂತೆಯೇ ಸೋಂಕಿತನೊಂದಿಗೆ ಇದ್ದ ಆತನ ಸಂಬಂಧಿಕರನ್ನೂ ಕೂಡ ಪ್ರತ್ಯೇಕವಾಗಿ ಇರಿಸಲಾಗಿದ್ದು, ತಿರುಮಲದ ಮಾಧವನಿಲಯದಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ತೀವ್ರ ನಿಗಾ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ಮುಂಜಾಗ್ರತಾ ಕ್ರಮವಾಗಿ ತಿರುಮಲ ದೇಗುಲವನ್ನು ತಾತ್ಕಾಲಿಕವಾಗಿ ಮುಚ್ಚುವ ಕುರಿತು ಟಿಟಿಡಿ ಅಧಿಕಾರಿಗಳು ಚಿಂತನೆಯಲ್ಲಿ ತೊಡಗಿದ್ದು, ಈಗಾಗಲೇ ಈ ಸಂಬಂಧ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ತಿರುಮಲದಲ್ಲಿರುವ ಎಲ್ಲ ಭಕ್ತಾದಿಗಳನ್ನು ತಿರುಪತಿಗೆ ವಾಪಸ್ ಕಳುಹಿಸಲಾಗುತ್ತಿದ್ದು, ಇದರ ಮೊದಲ ಹಂತವಾಗಿ ಅಲಿಪಿರಿ ಮೂಲಕ ಕಾಲ್ನಡಿಗೆ ಭಕ್ತಾದಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿದೆ. ಕ್ರಮೇಣ ಬೆಟ್ಟದ ಮೇಲಿರುವ ಎಲ್ಲ ಭಕ್ತಾದಿಗಳನ್ನೂ ಕೆಳಗೆ ಕಳುಹಿಸಿ ಬಳಿಕ ದೇಗುಲವನ್ನು ತಾತ್ಕಾಲಿಕವಾಗಿ ಮುಚ್ಚಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

ಇನ್ನು ಈ ಬಗ್ಗೆ ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ಅವರು ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಕಳೆದ ಹಲವು ದಿನಗಳಿಂದ ದೇಗಲುಕ್ಕೆ ಆಗಮಿಸದಂತೆ ಭಕ್ತಾದಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೀಗ ದೇಗುಲವನ್ನು ಮುಚ್ಚಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಭಕ್ತರಿಗೆ ದೇಗುಲ ಮುಚ್ಚಿದರೂ ಅಲ್ಲಿನ ಅರ್ಚಕರು ನಿತ್ಯ ಪೂಜಾ ಕೈಂಕರ್ಯ ಮುಂದುವರೆಸಲಿದ್ದಾರೆ ಎಂದು ಹೇಳಿದ್ದಾರೆ.
ಅಂತೆಯೇ ಪ್ರಸ್ತುತ ಅನಾರೋಗ್ಯಕ್ಕೆ ತುತ್ತಾಗಿರುವ ವೈರಸ್ ಸೋಂಕಿತ ವ್ಯಕ್ತಿಯನ್ನು ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂತೆಯೇ ಇವರೊಂದಿಗೆ ಇದ್ದ ಸುಮಾರು 100 ಮಂದಿ ಭಕ್ತರನ್ನೂ ಕೂಡ ಪ್ರತ್ಯೇಕವಾಗಿರಿಸಲಾಗಿದೆ. ಅಲ್ಲದೆ ಈ 100 ಮಂದಿಯೊಂದಿಗೆ ದರ್ಶನ ಪಡೆದಿದ್ದ ಹಲವು ಭಕ್ತರ ಮೇಲೂ ನಿಗೂ ಇರಿಸಲಾಗಿದ್ದು, ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ರವಾನಿಸಲಾಗುತ್ತದೆ ಎಂದು ಹೇಳಲಾಗಿದೆ. ಅಂತೆಯೇ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಮತ್ತು ಆತನೊಂದಿಗೆ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


