ನಿರ್ಭಯಾ ಪ್ರಕರಣ: ಕ್ಯುರೇಟಿವ್ ಅರ್ಜಿ ವಜಾ, 4 ಅಪರಾಧಿಗಳಿಗೆ ನಾಳೆಯೇ ಗಲ್ಲು ಶಿಕ್ಷೆ ಜಾರಿ!
ನಿರ್ಭಯಾ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಪ್ರಕರಣ ಎಲ್ಲ ನಾಲ್ಕೂ ಅಪರಾಧಿಗಳನ್ನು ನಾಳೆಯೇ ಗಲ್ಲಿಗೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ನವದೆಹಲಿ: ನಿರ್ಭಯಾ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಪ್ರಕರಣ ಎಲ್ಲ ನಾಲ್ಕೂ ಅಪರಾಧಿಗಳನ್ನು ನಾಳೆಯೇ ಗಲ್ಲಿಗೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.
2012 ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಪರಿಹಾರಾತ್ಮಕ (ಕ್ಯುರೇಟಿವ್) ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಅರುಣ್ ಮಿಶ್ರಾ, ಆರ್.ಎಫ್. ನಾರಿಮನ್, ಆರ್. ಭಾನುಮತಿ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠವು, ‘ಮೌಖಿಕ ವಿಚಾರಣೆ ಹಾಗೂ ಗಲ್ಲು ಶಿಕ್ಷೆ ಜಾರಿ ಆದೇಶಕ್ಕೆ ತಡೆ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಅಶೋಕ್ ಭೂಷಣ್ ಮತ್ತು ಎ.ಎಸ್.ಬೋಪಣ್ಣ ನೇತೃತ್ವದ ನ್ಯಾಯಪೀಠ ಕಳೆದ ಜನವರಿಯಲ್ಲಿ ಆರೋಪಿಯ ಮನವಿಯನ್ನು ವಜಾಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪವನ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಮಾರ್ಚ್ 04ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಿರಸ್ಕರಿಸಿದ್ದರು. ಬಳಿಕ ಆರೋಪಿಗಳು ಸುಪ್ರೀ ಕೋರ್ಟ್ ತೀರ್ಪು ಪ್ರಶ್ನಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದರು. ಆದರೆ, ಆಯೋಗ ಕೂಡ ಅರ್ಜಿಯನ್ನು ತಿರಸ್ಕರಿಸಿತ್ತು.
ಪ್ರಕರಣ ಸಂಬಂಧ ಮಾರ್ಚ್ 5ರಂದು ಪ್ರಕಟಗೊಂಡ ತೀರ್ಪಿನ ಪ್ರಕಾರ ನಾಳೆ (ಮಾರ್ಚ್ 20) ಬೆಳಿಗ್ಗೆ 5.30ಕ್ಕೆ ಪವನ್ ಗುಪ್ತ (25), ಮುಖೇಶ್ ಕುಮಾರ್ ಸಿಂಗ್ (32), ವಿನಯ್ (26), ಅಕ್ಷಯ್ (31) ಆರೋಪಿಗಳನ್ನು ಗಲ್ಲಿಗೇರಿಸಲಾಗುತ್ತದೆ.
ದೋಷಿಗಳಿಗೆ ಎಲ್ಲಾ ಮಾರ್ಗ ಬಂದ್
ಡೆತ್ ವಾರಂಟ್ ಮತ್ತು ಮರಣದಂಡನೆ ದಿನಾಂಕದ ನಡುವೆ 14 ದಿನಗಳ ವ್ಯತ್ಯಾಸ ಇರಬೇಕು ಎಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಹೇಳುತ್ತವೆ. ಅದರಂತೆ ಮಾರ್ಚ್ 5ರಂದು ಅಪರಾಧಿಗಳ ಡೆತ್ ವಾರಂಟ್ ಹೊರಡಿಸಲಾಗಿದೆ. ಅಷ್ಟೇ ಅಲ್ಲದೆ ಅಪರಾಧಿಗಳಿಗೆ ಎಲ್ಲಾ ಕಾನೂನು ಮಾರ್ಗಗಳು ಸಹ ಮುಗಿದಿವೆ. ಮರಣದಂಡನೆಗೆ ಗುರಿಯಾದ ಅಪರಾಧಿಗೆ ಎಲ್ಲಾ ಕಾನೂನು ಮಾರ್ಗಗಳನ್ನು ಬಳಸುವ ಹಕ್ಕಿದೆ. ಈ ನಿಟ್ಟಿನಲ್ಲಿ ನಾಲ್ವರು ಸಹ ತಮ್ಮ ಎಲ್ಲಾ ಕಾನೂನು ಹಕ್ಕುಗಳನ್ನು ಸಹ ಬಳಸಿದ್ದಾರೆ. ನಾಲ್ವರ ಪರಿಶೀಲನಾ ಅರ್ಜಿಗಳು ಮತ್ತು ಕ್ಷಮಾದಾನ ಅರ್ಜಿಗಳನ್ನು ಸಹ ವಜಾಗೊಂಡಿವೆ. ಅಪರಾಧಿಗಳು ಗಲ್ಲಿಗೇರಿಸುವುದನ್ನು ತಪ್ಪಿಸಲು ಇಂದು ಕೂಡ ಅರ್ಜಿಯನ್ನು ಹಾಕಿದರೂ ಅವರನ್ನು ಗಲ್ಲಿಗೇರಿಸುವುದನ್ನು ತಪ್ಪಿಸುವುದು ತುಂಬಾ ಕಡಿಮೆ ಎನ್ನಲಾಗುಗುತ್ತಿದೆ. ಏಕೆಂದರೆ ಭಯೋತ್ಪಾದಕ ಯಾಕೂಬ್ ಮೆಮನ್ ನೇಣು ಹಾಕುವ ಒಂದು ದಿನ ಮೊದಲು ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರ ವಕೀಲರು ರಾತ್ರಿ ಸುಪ್ರೀಂ ಕೋರ್ಟಿಗೆ ತಲುಪಿದರು. ಆದರೆ ಇದರ ಹೊರತಾಗಿಯೂ ಅವನ ನೇಣು ನಿಲ್ಲಲಿಲ್ಲ.
ಇದೇ ಪ್ರಕರಣದ ಆಧಾರದ ಮೇಲೆ ನಾಳೆಯೇ ಎಲ್ಲ ನಾಲ್ಕೂ ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡುವ ಸಾಧ್ಯತೆ ಇದೆ.
ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಗೆ ಸಕಲ ಸಿದ್ಧತೆ ಪೂರ್ಣ
ಇನ್ನು ನಿರ್ಭಯ ದೋಷಿಗಳನ್ನು ಗಲ್ಲಿಗೇರಿಸಲಿರುವ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಗೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ನಿರ್ಭಯಾ ದೋಷಿಗಳಾದ ಪವನ್ ಗುಪ್ತಾ, ಮುಖೇಶ್ ಸಿಂಗ್, ಅಕ್ಷಯ್ ಕುಮಾರ್ ಮತ್ತು ವಿನಯ್ ಶರ್ಮಾ ಅವರ ತೂಕದಷ್ಟೇ ಮರಳು ಚೀಲಗಳನ್ನು ನೇಣುಗಂಬಕ್ಕೆ ಕಟ್ಟಿ ಪರೀಕ್ಷೆ ನಡೆಸಲಾಗಿದೆ. ಹ್ಯಾಂಗ್ ಮನ್ ಪವನ್ ಜಲ್ಲಾಡ್ ನೇಣುಗಂಬಕ್ಕೆ ಮರಳಿನ ಚೀಲಗಳನ್ನು ಕಟ್ಟಿ ಪರೀಕ್ಷೆ ನಡೆಸಿದ್ದಾರೆ. ಪವನ್ ಜಲ್ಲಾಡ್ ನ ತಂದೆ ಕೂಡ ಹ್ಯಾಂಗ್ ಮನ್ ಆಗಿ ಸೇವೆ ಸಲ್ಲಿಸಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ಮಾಡಿದ್ದ ಸತ್ವಂತ್ ಸಿಂಗ್ ಮತ್ತು ಕೆಹರ್ ಸಿಂಗ್ ರನ್ನು ಗಲ್ಲಿಗೇರಿಸಿದ್ದರು. ಇನ್ನು ಅಪರಾಧಿಗಳನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ಓರ್ವ ವೈದ್ಯೇ, ಓರ್ವ ಫಿಸಿಯೋ ಥೆರಪಿಸ್ಟ್, ಜೈಲಿನ ಹಿರಿಯ ಅಧಿಕಾರಿಗಳು, ಹಾಗೂ ನ್ಯಾಯಾಲಯದ ಅಧಿಕಾರಿಗಳು ಇರಲಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


