ಗೋಮೂತ್ರ, ಹಸುವಿನ ಸಗಣಿಯಿಂದ ಕೊರೋನಾ ವೈರಸ್ ಗುಣಪಡಿಸಬಹುದು: ಅಸ್ಸಾಂ ಬಿಜೆಪಿ ಶಾಸಕಿ
ಮಾರಕ ಕೊರೋನಾ ವೈರಸ್ ಗುಣಪಡಿಸಲು ಇಡೀ ಜಗತ್ತೇ ಪ್ರಯತ್ನಿಸುತ್ತಿದ್ದರೆ ಅಸ್ಸಾಂನ ಬಿಜೆಪಿ ಶಾಸಕಿಯೊಬ್ಬರು ಗೋಮೂತ್ರ ಮತ್ತು ಸೆಗಣಿಯಿಂದ ಪರಿಹರಿಸಬಹುದು ಎಂದು ಹೇಳಿ ಸುದ್ದಿಯಾಗಿದ್ದಾರೆ.

ಗುವಾಹಟಿ: ಮಾರಕ ಕೊರೋನಾ ವೈರಸ್ ಗುಣಪಡಿಸಲು ಇಡೀ ಜಗತ್ತೇ ಪ್ರಯತ್ನಿಸುತ್ತಿದ್ದರೆ ಅಸ್ಸಾಂನ ಬಿಜೆಪಿ ಶಾಸಕಿಯೊಬ್ಬರು ಗೋಮೂತ್ರ ಮತ್ತು ಹಸುವಿನ ಸಗಣಿಯಿಂದ ಪರಿಹರಿಸಬಹುದು ಎಂದು ಹೇಳಿ ಸುದ್ದಿಯಾಗಿದ್ದಾರೆ.
ಅಸ್ಸಾಂ ವಿಧಾನಸಭೆಯಲ್ಲಿ ನಿನ್ನೆ ಬಾಂಗ್ಲಾದೇಶಕ್ಕೆ ಗೋವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ ಈ ಸಲಹೆ ಕೊಟ್ಟು ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದರು. ''ನಮಗೆಲ್ಲಾ ಗೊತ್ತು, ಸೆಗಣಿ ಅತ್ಯಂತ ಉಪಕಾರಿ. ಅದೇ ರೀತಿ ಗೋಮೂತ್ರವನ್ನು ಸಿಂಪಡಿಸಿದರೆ ಅದು ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸುತ್ತದೆ. ಇಷ್ಟು ಮಹತ್ವದ ಸೆಗಣಿ ಮತ್ತು ಗೋಮೂತ್ರವನ್ನು ಕೊರೊನಾ ವೈರಸ್ ಸೋಂಕನ್ನು ಗುಣಪಡಿಸಲು ಬಳಸಬಹುದು ಎಂಬುದು ನನ್ನ ಅಭಿಪ್ರಾಯ'' ಎಂದರು.
ಗೋವು ನಮಗೆ ಒಂದು ಸ್ವತ್ತಾಗಿದ್ದು ಇದರಿಂದ ಕ್ಯಾನ್ಸರ್ ನಂತಹ ಮಾರಕ ರೋಗವನ್ನು ಕೂಡ ಗುಣಪಡಿಸಬಹುದು. ಗುಜರಾತ್ ನ ಆಯುರ್ವೇದ ಆಸ್ಪತ್ರೆಯೊಂದರಲ್ಲಿ ಕ್ಯಾನ್ಸರ್ ರೋಗಿಗಳನ್ನು ಗೋವುಗಳ ಜೊತೆ ಇರಲು ಬಿಡುತ್ತಾರೆ. ಸೆಗಣಿಯನ್ನು ಕ್ಯಾನ್ಸರ್ ರೋಗಿಗಳ ದೇಹಕ್ಕೆ ಹಚ್ಚುತ್ತಾರೆ. ಗೋಮೂತ್ರದಿಂದ ತಯಾರಿಸಿದ ಪಂಚಾಮೃತವನ್ನು ಅವರಿಗೆ ಕುಡಿಯಲು ಕೊಡುತ್ತಾರೆ ಎಂದು ಕೂಡ ಶಾಸಕಿ ಹೇಳಿದರು.
ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲಿಗೆ ಕಾಣಿಸಿಕೊಂಡ ಕೊರೋನಾ ವೈರಸ್ ಇಂದು 50ಕ್ಕೂ ಹೆಚ್ಚು ದೇಶಗಳಿಗೆ ಹಬ್ಬಿವೆ. ಇದೊಂದು ಜಾಗತಿಕ ತುರ್ತು ಆರೋಗ್ಯ ಸೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಇದುವರೆಗೆ 3 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 90 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಭಾರತದಲ್ಲಿ ದೆಹಲಿ, ತೆಲಂಗಾಣ ಮತ್ತು ಜೈಪುರದಲ್ಲಿ ಕೊರೊನಾ ವೈರಸ್ ವರದಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದೃಢಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


