ದೇಶ

ಮರೆಯಲಾಗದ ಕರಾಳ ದಿನಕ್ಕಿಂದು 45 ವರ್ಷ: ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದೇಕೆ? ಇಲ್ಲಿದೆ ಮಾಹಿತಿ...

1975ರಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಘೋಷಿಸಿದ್ದ ತುರ್ತು ಪರಿಸ್ಥಿತಿ ದೇಶದ ರಾಜಕೀಯ ಪುಟಗಳಲ್ಲಿ ಮರೆಯಲಾಗದಂತಹ ಕರಾಳ ದಿನವಾಗಿ ದಾಖಲಾಗಿದೆ. ಬರೋಬ್ಬರಿ 21 ತಿಂಗಳುಗಳ ಕಾಲ ಅಸ್ತಿತ್ವದಲ್ಲಿದ್ದ ತುರ್ತು ಪರಿಸ್ಥಿತಿ ಘೋಷಣೆಯಾಗಿ ಇಂದಿಗೆ 45 ವರ್ಷಗಳು ಪೂರ್ಣಗೊಂಡಿವೆ.

ಮರೆಯಲಾಗದ ಕರಾಳ ದಿನಕ್ಕಿಂದು 45 ವರ್ಷ: ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದೇಕೆ? ಇಲ್ಲಿದೆ ಮಾಹಿತಿ...
ಇಂದಿರಾ ಗಾಂಧಿ (ಸಂಗ್ರಹ ಚಿತ್ರ)
Published On :

1975ರಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಘೋಷಿಸಿದ್ದ ತುರ್ತು ಪರಿಸ್ಥಿತಿ ದೇಶದ ರಾಜಕೀಯ ಪುಟಗಳಲ್ಲಿ ಮರೆಯಲಾಗದಂತಹ ಕರಾಳ ದಿನವಾಗಿ ದಾಖಲಾಗಿದೆ. ಬರೋಬ್ಬರಿ 21 ತಿಂಗಳುಗಳ ಕಾಲ ಅಸ್ತಿತ್ವದಲ್ಲಿದ್ದ ತುರ್ತು ಪರಿಸ್ಥಿತಿ ಘೋಷಣೆಯಾಗಿ ಇಂದಿಗೆ 45 ವರ್ಷಗಳು ಪೂರ್ಣಗೊಂಡಿವೆ. 

ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದಾದರೂ ಏಕೆ? ಇಲ್ಲಿದೆ ಮಾಹಿತಿ...
1971ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷ ಭಾರೀ ಪ್ರಮಾಣ ಚುನಾವಣಾ ಅಕ್ರಮದಲ್ಲಿ ತೊಡಗಿತ್ತು ಎಂದು ಆರೋಪಿಸಿ ವಿರೋಧ ಪಕ್ಷಗಳು ಸಣ್ಣಪುಟ್ಟ ಪ್ರತಿಭಟನೆಗಳನ್ನು ನಡೆಸುತ್ತಿದ್ದವು. ಈ ನಡುವೆ 1971ರ ಚುನಾವಣೆಗಳಲ್ಲಿ ಇಂದಿರಾ ಗಾಂಧಿ ಎದುರು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ಸೋಲನುಭವಿಸಿದ್ದ ಜನತಾ ಪಾರ್ಟಿ ಅಭ್ಯರ್ಥಿ ರಾಜ ನಾರಾಯಣ್ ಅವರು, ಇಂದಿರಾ ಅವರು ಅಧಿಕಾರದ ದುರುಪಯೋಗ ಮಾಡಿಕೊಂಡು ಚುನಾವಣೆಯಲ್ಲಿ ಜಯಗಳಿಸಿದ್ದಾರೆಂದು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. 

4 ವರ್ಷಗಳ ವಿಚಾರಣೆ ಬಳಿಕ. 1975ರ ಜೂನ್ 12 ರಂದು ನ್ಯಾಯಾಲಯ ಪ್ರಧಾನಿಯನ್ನು ತಪ್ಪಿತಸ್ಥೆ ಎಂದು ಘೋಷಿಸಿ ಇಂದಿರಾ ಆಯ್ಕೆಯನ್ನೇ ರದ್ದುಗೊಳಿಸಿತ್ತಲ್ಲದೇ, ಅಕ್ರಮ ಎಸಗಿದ್ದಕ್ಕಾಗಿ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆಯೂ ನಿರ್ಬಂಧಿಸಿತ್ತು. ತೀರ್ಪು ಹೊರ ಬಿದ್ದ ಬಳಿಕ, ಜಯಪ್ರಕಾಶ್ ನಾರಾಯಣ್, ರಾಜ ನಾರಾಯಣ್ ಮತ್ತು ಮೊರಾರ್ಜಿ ದೇಸಾಯಿ ಮುಂತಾದ ನಾಯಕರೆಲ್ಲರೂ ನೇತೃತ್ವ ವಹಿಸಿ ಪ್ರತಿಭಟನೆ ತೀವ್ರಗೊಳಿಸಿದ್ದರು. ಈ ಆಂದೋಲನವು ಸಂಸತ್ ಕಟ್ಟಡ, ಪ್ರಧಾನಮಂತ್ರಿಗಳ ನಿವಾಸದವರೆಗೂ ತಲುಪಿತು. 

ದಿನ ಕಳೆದಂತೆ ಪ್ರತಿಭಟನೆ ತೀವ್ರಗೊಂಡಿತ್ತು. ಎಲ್ಲೆಡೆ ಪ್ರತಿಭಟನಾಕಾರರು ಗದ್ದಲವೆಬ್ಬಿಸತೊಡಗಿದರು. ಅಷ್ಟರಲ್ಲಾಗಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿದ್ದ ಸಿದ್ಧಾರ್ಥ ಶಂಕರ್ ರಾಯ್ ಅವರು, ಆಂತರಿಕ ತುರ್ತು ಪರಿಸ್ಥಿತಿ ಹೇರುವಂತೆ ಇಂದಿರಾ ಅವರಿಗೆ ಸಲಹೆ ನೀಡಿದರು. ಆಂತರಿಕ ಕ್ಷೋಭೆಯಿಂದಾಗಿ ದೇಶದ ಭದ್ರತೆಗೆ ಅಪಾಯವಿದೆ. ಹೀಗಾಗಿ ತುರ್ತು ಪರಿಸ್ಥಿತಿ ಘೋಷಿಸಬೇಕೆಂದು ರಾಷ್ಟ್ರಪತಿಗೆ ಸಲಹೆ ನೀಡಿ ಒಕ್ಕಣೆಯನ್ನು ಬರೆದುಕೊಟ್ಟರು. 

ಸಂವಿಧಾನದ ಮಿತಿಯೊಳಗಿದ್ದುಕೊಂಡೇ ಪ್ರಜಾಪ್ರಭುತ್ವದ ಹಕ್ಕುಗಳನ್ನು ಹೇಗೆ ಹತ್ತಿಕ್ಕಬಹುದೆಂದು ಅವರು ತೋರಿಸಿಕೊಟ್ಟರು. ಹತಾಶರಾಗಿದ್ದ ಇಂದಿರಾ ಅವರು ಸಲಹೆಯಂತೆಯೇ, ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಅವರು ತುರ್ತು ಪರಿಸ್ಥಿತಿ ಘೋಷಿಸಿಬಿಟ್ಟರು. 

1975ರ ತುರ್ತು ಸ್ಥಿತಿ ಒಂದೋ ಎರಡೋ ತಿಂಗಳಿಗೆ ಮುಗಿಯಲಿಲ್ಲ. 1975 ಜೂನ್ 25 ರಿಂದ 1977 ಮಾರ್ಚ್ 21ರವರೆಗೆ ಬರೋಬ್ಬರಿ 21 ತಿಂಗಳು ಅಸ್ತಿತ್ವದಲ್ಲಿ ಇತ್ತು. 1977ರಲ್ಲಿ ಪುನಃ ಚುನಾವಣೆಗಳನ್ನು ಘೋಷಿಸುವವರೆಗೂ, ಸಂವಿಧಾನದ ನಿಯಮದ ಪ್ರಕಾರ, ಪ್ರತಿ 6 ತಿಂಗಳಿಗೊಮ್ಮೆ ರಾಷ್ಟ್ರಪತಿ ತುರ್ತು ಪರಿಸ್ಥಿತಿ ಮುಂದುವರಿಸಲು ಅನುಮತಿ ಕೊಡುತ್ತಲೇ ಹೋದರು. ಅಂತಿಮವಾಗಿ 1977ರ ಮಾರ್ಚ್ನಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಿದ ಬಳಿಕವಷ್ಟೇ 1977ರ ಮಾರ್ಚ್ 23ರಂದು ತುರ್ತು ಪರಿಸ್ಥಿತಿಯ ಅಧಿಕೃತವಾಗಿ ಕೊನೆಗೊಂಡಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.