ದೆಹಲಿಯಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಪತ್ರಕರ್ತರ ಮೇಲೆ ಗುಂಡಿನ ದಾಳಿ, ಸಾವಿನ ಸಂಖ್ಯೆ 9ಕ್ಕೇರಿಕೆ
ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಟಿವಿ ವಾಹಿನಿಯ ವರಿದಾರರ ಮೇಲೂ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಟಿವಿ ವಾಹಿನಿಯ ವರಿದಾರರ ಮೇಲೂ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಇಂದು ನಡೆದ ಹಿಂಸಾಚಾರದಲ್ಲಿ ಪತ್ರಕರ್ತರು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮೌಜ್ ಪುರದಲ್ಲಿ ಪತ್ರಕರ್ತ ಆಕಾಶ್ ನಪ ಅವರ ಮೇಲೆ ಗುಂಡು ಹಾರಿಸಲಾಗಿದೆ. ಗುಂಡೇಟಿನಿಂದ ಗಾಯಗೊಂಡ ಆಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಎನ್ ಡಿಟಿವಿಯ ಇಬ್ಬರು ಪತ್ರಕರ್ತರ ಮೇಲೂ ಗಂಭೀರ ಹಲ್ಲೆ ನಡೆಸಲಾಗಿದೆ. ಹಲವು ವಾಹನ, ಅಂಗಡಿ ಹಾಗೂ ಮಸೀದಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವು ಕಡೆ ಪೆಟ್ರೋಲ್ ಬಾಂಬ್ ಗಳನ್ನು ಎಸೆಯಲಾಗಿದೆ.
ದೆಹಲಿಯ ಈಶಾನ್ಯ ಭಾಗದ ಜಫ್ರಾಬಾದ್, ಬ್ರಹಂಪುರಿ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಕಲ್ಲು ತೂರಾಟ, ಗಲಭೆ ನಡೆದ ಘಟನೆ ವರದಿಯಾಗಿದೆ.
ಕಳೆದ ಭಾನುವಾರದಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಎರಡು ಗುಂಪುಗಳ ಮಧ್ಯೆ ನಡೆದ ಗಲಭೆಯಲ್ಲಿ ನಿನ್ನೆ ನಾಲ್ವರು ನಾಗರಿಕರು ಮತ್ತು ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿ ಐವರು ಮೃತಪಟ್ಟಿದ್ದರು.105 ಮಂದಿ ಗಾಯಗೊಂಡಿದ್ದರು. ಇಂದು ಮತ್ತೆ ಅದೇ ಪ್ರದೇಶದಲ್ಲಿ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ.
ಸದ್ಯ ಪರಿಸ್ಥಿತಿ ಉದ್ವಿಗ್ನವಾಗಿದ್ದು ಈಶಾನ್ಯ ದೆಹಲಿಯಿಂದ ತಮಗೆ ನಿರಂತರವಾಗಿ ಹಿಂಸಾಚಾರದ ಬಗ್ಗೆ ಕರೆಗಳು ಬರುತ್ತಿವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಮೃತರ ಸಂಖ್ಯೆ 9ಕ್ಕೆ ಏರಿಕೆ
ಈ ಮಧ್ಯೆ ನಿನ್ನೆಯ ಹಿಂಸಾಚಾರದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಮೃತಪಟ್ಟಿದ್ದು, ಮಡಿದವರ ಸಂಖ್ಯೆ 9ಕ್ಕೇರಿದೆ.
ಅಮಿತ್ ಶಾ ಸಭೆ: ಇದೀಗ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಪರಿಸ್ಥಿತಿ ಪರಾಮರ್ಶೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ಆರಂಭವಾಗಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೆ.ಗವರ್ನರ್ ಅನಿಲ್ ಬೈಜಾಲ್, ದೆಹಲಿ ಪೊಲೀಸ್ ಆಯುಕ್ತೆ ಅಮೂಲ್ಯ ಪಾಟ್ನೈಕ್, ಕಾಂಗ್ರೆಸ್ ನಾಯಕ ಸುಭಾಷ್ ಚೋಪ್ರಾ, ಬಿಜೆಪಿ ನಾಯಕರಾದ ಮನೋಜ್ ತಿವಾರಿ, ರಂಬೀರ್ ಸಿಂಗ್ ಬಿಧುರಿ ಮೊದಲಾದವರು ಭಾಗವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


