ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನಕ್ಕೆ ಕ್ಷಣಗಣನೆ: ಸ್ವಾಗತಕ್ಕೆ ಅಹಮದಾಬಾದ್ ನಗರ ಸಜ್ಜು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇನ್ನು ಕೆಲವೇ ಹೊತ್ತಿನಲ್ಲಿ ಗುಜರಾತ್ ನ ಅಹಮದಾಬಾದ್ ಗೆ ಆಗಮಿಸಲಿದ್ದಾರೆ.

ನವದೆಹಲಿ:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇನ್ನು ಕೆಲವೇ ಹೊತ್ತಿನಲ್ಲಿ ಗುಜರಾತ್ ನ ಅಹಮದಾಬಾದ್ ಗೆ ಆಗಮಿಸಲಿದ್ದಾರೆ.
ಟ್ರಂಪ್ ಅವರ ಜೊತೆ ಅವರ ಪತ್ನಿ ಮೆಲಾನಿಯಾ ಟ್ರಂಪ್, ಪುತ್ರಿ ಇವಾಂಕಾ ಮತ್ತು ಅಲ್ಲಿನ ಉನ್ನತ ಮಟ್ಟದ ನಿಯೋಗ ಭಾರತಕ್ಕೆ ಆಗಮಿಸುತ್ತಿದೆ. ಇಂದು ಅಹಮದಾಬಾದ್ ನ ಮೊಟೆರಾ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಎಂಬ ಬೃಹತ್ ಕಾರ್ಯಕ್ರಮ ನಡೆಯುವುದು ಇಂದಿನ ಟ್ರಂಪ್ ಕಾರ್ಯಕ್ರಮದ ಹೈಲೈಟ್ ಆಗಿದೆ. ಇದಕ್ಕಾಗಿ ಮೊಟೆರಾ ಸ್ಟೇಡಿಯಂ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಟ್ರಂಪ್ ಆಗಮನ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು, ನಿಮ್ಮನ್ನು ಅಹಮದಾಬಾದ್ ನಲ್ಲಿ ನಾವು ಭೇಟಿಯಾಗೋಣ ಎಂದು ಟ್ವೀಟ್ ಮಾಡಿದ್ದಾರೆ.
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸಬರ್ಮತಿ ಆಶ್ರಮಕ್ಕೆ ಬಂದು ಅಲ್ಲಿಂದ ಮೊಟೆರಾ ಸ್ಟೇಡಿಯಂಗೆ ಪ್ರಧಾನಿ ಮೋದಿ ಮತ್ತು ಟ್ರಂಪ್ ಅವರು ಸುಮಾರು 22 ಕಿಲೋ ಮೀಟರ್ ಉದ್ದ ರೋಡ್ ಶೋ ನಡೆಸಲಿದ್ದು ಇದರಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಮೊಟೆರಾ ಸ್ಟೇಡಿಯಂ ಸುತ್ತ 16 ಕಡೆಗಳಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯಿರುತ್ತದೆ. ಪ್ರತಿ ಕಡೆಯಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಲು ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತರು ಮತ್ತು ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಹಲವು ವಾರಗಳಿಂದಲೇ ತಯಾರಿ ನಡೆಸಿದ್ದಾರೆ. ಅಮೆರಿಕ ಶ್ವೇತಭವನದಿಂದ ಹೊರಟು ಇಂದು ಟ್ರಂಪ್ ಅವರು ಆಗಮಿಸಿ ಸಂಚರಿಸಲಿರುವ ನಗರಗಳಲ್ಲಿ ಮತ್ತು ನಾಳೆಯ ಕಾರ್ಯಕ್ರಮಗಳ ಮಧ್ಯೆ ಜಾಹಿರಾತು, ಫಲಕ ಇತ್ಯಾದಿಗಳಿಗೆ ಮತ್ತು ಬೇರೆ ಹಲವು ರೀತಿಯ ಖರ್ಚು ವೆಚ್ಚಗಳು ಸೇರಿ ಕೇಂದ್ರ ಸರ್ಕಾರ 14 ದಶಲಕ್ಷ ಡಾಲರ್ ನಷ್ಟು ಖರ್ಚು ಮಾಡಿದೆ ಎನ್ನಲಾಗುತ್ತಿದೆ. 1640 ಅಡಿ ಎತ್ತರದ ಗೋಡೆ ನಿರ್ಮಾಣ ಮಾಡಲಾಗಿದೆ.
ಟ್ರಂಪ್ ದಂಪತಿ ಇಂದು ಮೊಟೆರಾ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ನಂತರ ಉತ್ತರ ಪ್ರದೇಶದ ತಾಜ್ ಮಹಲ್ ಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯ ಸವಿಯಲಿದ್ದಾರೆ. ಇಲ್ಲಿಗೆ ಪ್ರಧಾನಿ ಮೋದಿ ಹೋಗುವುದಿಲ್ಲ. ಇಲ್ಲಿ ಸುಮಾರು 45 ನಿಮಿಷಗಳ ಕಾಲ ಇದ್ದು ನಂತರ ಟ್ರಂಪ್ ದಂಪತಿ ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಸಾಮಾನ್ಯವಾಗಿ ಡೊನಾಲ್ಡ್ ಟ್ರಂಪ್ ಅವರು ವಿದೇಶಿ ಪ್ರವಾಸಗಳನ್ನು ಅಷ್ಟೊಂದು ಇಷ್ಟಪಡುವವರಲ್ಲ. ಆದರೆ ಭಾರತದ ಮೇಲೆ ಅದರಲ್ಲೂ ಪ್ರಧಾನಿ ಮೋದಿಯವರ ಮೇಲಿನ ವಿಶೇಷ ಆತ್ಮೀಯತೆ, ಪ್ರೀತಿಯಿಂದ ಭಾರತದಲ್ಲಿ ಎರಡು ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಭಾರತದಲ್ಲಿದೆ ಟ್ರಂಪ್ ಆಸ್ತಿ: ಇವೆಲ್ಲಕ್ಕಿಂತ ಹೆಚ್ಚಾಗಿ ಭಾರತದ ಮೇಲೆ ಟ್ರಂಪ್ ವಿಶೇಷವಾದ ಸಂಬಂಧವಿದೆ. ಅಮೆರಿಕದ ನ್ಯೂಜೆರ್ಸಿಯ ಅಟ್ಲಾಂಟಿಕ್ ಸಿಟಿಯಲ್ಲಿ ಟ್ರಂಪ್ ಅವರು ಹೊಟೇಲ್ ಹೊಂದಿದ್ದಾರೆ. ಅದರ ಹೆಸರು ಟ್ರಂಪ್ ತಾಜ್ ಮಹಲ್ ಎಂದು. ಇನ್ನು ಭಾರತದಲ್ಲಿಯೂ ಅವರು ಹಲವು ಆಸ್ತಿಗಳನ್ನು ಹೊಂದಿದ್ದಾರಂತೆ.
ಈ ವರ್ಷಾಂತ್ಯಕ್ಕೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಅಲ್ಲಿರುವ ಭಾರತೀಯರನ್ನು ಸೆಳೆಯಲು ಚುನಾವಣಾ ಅಸ್ತ್ರವಾಗಿ ಕೂಡ ತಮ್ಮ ಭಾರತ ಪ್ರವಾಸವನ್ನು ಟ್ರಂಪ್ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


