ಚೆನ್ನೈಯಲ್ಲಿ ಇಬ್ಬರು ಪತ್ರಕರ್ತರಿಗೆ ತಗುಲಿತು ಕೊರೋನಾ:ಆರೋಗ್ಯ ಸುದ್ದಿ ವರದಿಗಾರ, ವಾಹಿನಿ ಪತ್ರಕರ್ತನಿಗೆ ಸೋಂಕು
ಕೊರೋನಾ ಸೋಂಕು ಕುರಿತು ವರದಿ ಮಾಡುತ್ತಿದ್ದ ಆರೋಗ್ಯ ವಿಭಾಗದ ಪತ್ರಕರ್ತರೊಬ್ಬರಿಗೆ ತಮಿಳು ನಾಡಿನ ಚೆನ್ನೈಯಲ್ಲಿ ಕೊರೋನಾ ಸೋಂಕು ತಗುಲಿರುವುದು ಆತಂಕ ಹುಟ್ಟಿಸಿದೆ.

ಚೆನ್ನೈ: ಸಮಾಜದ ಆಗುಹೋಗುಗಳನ್ನು ಸುದ್ದಿ ಮಾಡುವ ಪತ್ರಕರ್ತರಿಗೂ ಇದೀಗ ಕೊರೋನಾ ಸೋಂಕು ತಗುಲಿದೆ. ತಮಿಳು ನಾಡಿನ ಚೆನ್ನೈಯಲ್ಲಿ 24-25 ವರ್ಷದ ಯುವ ಪತ್ರಕರ್ತರಿಬ್ಬರಿಗೆ ಭಾನುವಾರ ಸೋಂಕು ಕಾಣಿಸಿಕೊಂಡಿದೆ.
ಚೆನ್ನೈ ನಗರಕ್ಕೆ ಸಂಬಂಧಿಸಿದ, ಪಾಲಿಕೆ ವಿಷಯಗಳನ್ನು ವರದಿ ಮಾಡುತ್ತಿದ್ದ ಪತ್ರಕರ್ತನನ್ನು ಇತ್ತೀಚೆಗೆ ಕೋವಿಡ್-19ಗೆ ಸಂಬಂಧಿಸಿದ ಸುದ್ದಿಗಳ ವರದಿ ಮಾಡಲು ನಿಯೋಜಿಸಲಾಗಿತ್ತು. ಇವರು ತಮಿಳು ದೈನಿಕ ಪತ್ರಿಕೆಯ ವರದಿಗಾರರಾಗಿದ್ದು ಚೆನ್ನೈ ಪಕ್ಕದ ಟ್ರಿಪ್ಲಿಕೇನ್ ಹತ್ತಿರ ನೆಲೆಸಿದ್ದಾರೆ.
ಇತ್ತೀಚೆಗೆ ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿಗಳಿಗೆ ಮತ್ತು ಕೋವಿಡ್-19ಗೆ ಸಂಬಂಧಿಸಿದ ಸುದ್ದಿಗಳಿಗೆ ಸಂಬಂಧಪಟ್ಟ ಕಡೆ ಹೋಗಿ ಬರುತ್ತಿದ್ದರು. ಆದರೆ ಯಾವುದೇ ಕೊರೋನಾ ಸೋಂಕಿತ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿರುವುದು ತಿಳಿದುಬಂದಿಲ್ಲ ಎಂದು ಚೆನ್ನೈ ಮಹಾ ನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಟ್ರಿಪ್ಲಿಕೇನ್ ನಲ್ಲಿ ಇದೇ ಮೊದಲ ಕೊರೋನಾ ಪ್ರಕರಣವಾಗಿದೆ.
ತಾವು ವರದಿ ಮಾಡುತ್ತಿದ್ದ ಸಮಯದಲ್ಲಿ ಈ ಪತ್ರಕರ್ತ ರಿಪೊನ್ ಕಟ್ಟಡಕ್ಕೆ ಆಗಾಗ ಹೋಗಿಬರುತ್ತಿದ್ದರು. ಕೊರೋನಾ ಸೋಂಕಿನ ಲಕ್ಷಣ ಬಂದ ಕೂಡಲೇ ಅವರಾಗಿಯೇ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಅವರ ಸಂಪರ್ಕದಲ್ಲಿದ್ದ 50 ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸೋಂಕುನಿವಾರಿಸುವ ಕೆಲಸವನ್ನು ಮಾಡಲಾಗುತ್ತಿದ್ದು ನಂತರ 50 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸುತ್ತೇವೆ.ನಂತರ ಇವರನ್ನು ಎಲ್ಲಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗುವುದು ಎಂದು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಬ್ಬ ಟಿವಿ ಸುದ್ದಿವಾಹಿನಿಯ ಪತ್ರಕರ್ತರಾಗಿದ್ದು ಚೆನ್ನೈಯ ರಾಯಪುರಂ ವಲಯದಲ್ಲಿ(ಗುರುತು ನಿರಾಕರಿಸುವ ಹಿನ್ನೆಲೆಯಲ್ಲಿ ಸ್ಥಳ ಬೇರೆ ಸೂಚಿಸಲಾಗಿದೆ)ಪೊಲೀಸ್ ಕ್ವಾರ್ಟರ್ಸ್ ನಲ್ಲಿ ನೆಲೆಸಿದ್ದಾರೆ.
ಈ ಪತ್ರಕರ್ತರು ಯಾವುದೇ ಸೋಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದು ಕಂಡುಬಂದಿಲ್ಲ. ಸೋಂಕು ಎಲ್ಲಿಂದ, ಹೇಗೆ ತಗುಲಿರಬಹುದು ಎಂದು ಅಧಿಕಾರಿಗಳು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎರಡನೇ ಪ್ರಕರಣದಲ್ಲಿ ಪತ್ರಕರ್ತನ ತಂದೆ ಪೊಲೀಸ್ ಆಗಿದ್ದು ಅವರು ಯಾರದ್ದಾದರೂ ಸಂಪರ್ಕ ಹೊಂದಿದ್ದರೇ ಎಂಬ ಬಗ್ಗೆ ಪತ್ತೆ ಮಾಡಲಾಗುತ್ತಿದೆ.
ಈ ಇಬ್ಬರು ಪತ್ರಕರ್ತರ ಜೊತೆ ಸಂಪರ್ಕಕ್ಕೆ ಬಂದವರನ್ನೆಲ್ಲಾ ಪತ್ತೆಹಚ್ಚಿ ಕ್ವಾರಂಟೈನ್ ಮಾಡುವ ಕೆಲಸವನ್ನು ನಗರಪಾಲಿಕೆ ಮಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


