ದೇಶ

ಮಧ್ಯಪ್ರದೇಶ; ತಹಶಿಲ್ದಾರ್ ಲಂಚ ಕೇಳಿದ್ದಕ್ಕೆ ನೀಡಲಾಗದೆ ಎಮ್ಮೆ ತಂದು ಕಾರಿಗೆ ಕಟ್ಟಿಹಾಕಿದ ರೈತ!

ಕುಟುಂಬದಲ್ಲಿ ಭೂಮಿ ಹಂಚಿಕೆ ಮಾಡಿಕೊಳ್ಳಲು ತಹಸಿಲ್ದಾರ್ ಕೇಳಿದ ಲಂಚದ ಹಣ ನೀಡಲಾಗದೆ ರೈತ ತನ್ನ ಎಮ್ಮೆಯನ್ನು ತಂದು ತಹಶಿಲ್ದಾರ್ ಕಾರಿಗೆ ಕಟ್ಟಿಹಾಕಿದ ಘಟನೆ ಮಧ್ಯ ಪ್ರದೇಶದ ಭೋಪಾಲ್ ನ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ.

ಮಧ್ಯಪ್ರದೇಶ; ತಹಶಿಲ್ದಾರ್ ಲಂಚ ಕೇಳಿದ್ದಕ್ಕೆ ನೀಡಲಾಗದೆ ಎಮ್ಮೆ ತಂದು ಕಾರಿಗೆ ಕಟ್ಟಿಹಾಕಿದ ರೈತ!
ತಹಶಿಲ್ದಾರ್ ಕಾರಿಗೆ ಎಮ್ಮೆ ಕಟ್ಟಿಹಾಕಿರುವುದು
Published On :

ಭೋಪಾಲ್: ಕುಟುಂಬದಲ್ಲಿ ಭೂಮಿ ಹಂಚಿಕೆ ಮಾಡಿಕೊಳ್ಳಲು ತಹಸಿಲ್ದಾರ್ ಕೇಳಿದ ಲಂಚದ ಹಣ ನೀಡಲಾಗದೆ ರೈತ ತನ್ನ ಎಮ್ಮೆಯನ್ನು ತಂದು ತಹಶಿಲ್ದಾರ್ ಕಾರಿಗೆ ಕಟ್ಟಿಹಾಕಿದ ಘಟನೆ ಮಧ್ಯ ಪ್ರದೇಶದ ಭೋಪಾಲ್ ನ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ.


ರೈತನನ್ನು ಭೂಪಟ್ ರಘುವಂಶಿ ಎಂದು ಗುರುತಿಸಲಾಗಿದ್ದು ಇವರು ವಿದಿಶಾ ಜಿಲ್ಲೆಯ ಪತರಿಯಾ ಗ್ರಾಮದವರಾಗಿದ್ದು, ಏಳು ತಿಂಗಳ ಹಿಂದೆ ತನ್ನ ಹಾಗೂ ತನ್ನ ತಂದೆ ಮಧ್ಯೆ ಭೂ ಹಂಚಿಕೆ ಮಾಡಿಕೊಳ್ಳಲು ಅಗತ್ಯ ದಾಖಲೆಗಳನ್ನು ಕಂದಾಯ ಇಲಾಖೆಯಲ್ಲಿ ಸಲ್ಲಿಸಿದ್ದರು.


ಹಲವು ತಿಂಗಳುಗಳಿಂದ ನಾಯಬ್ ತಹಶಿಲ್ದಾರ್ ಸಿದ್ದಾಂತ್ ಸಿಂಗ್ ಸಿಂಗ್ಲ ಅವರ ಕಚೇರಿಗೆ ರೈತ ಹೋಗಿ ಭೂ ಹಂಚಿಕೆ ಮಾಡಿಸಿಕೊಡಬೇಕೆಂದು ಮನವಿ ಮಾಡಿಕೊಂಡರೂ ಅಧಿಕಾರಿ ಮನ್ನಿಸಲೇ ಇಲ್ಲ. ಕೆಲಸ ಮಾಡಿಕೊಡಬೇಕೆಂದರೆ 25 ಸಾವಿರ ರೂಪಾಯಿ ಲಂಚ ಕೊಡು ಎಂದು ಕೇಳುತ್ತಿದ್ದರಂತೆ. ಅಷ್ಟೊಂದು ಹಣ ರೈತನ ಬಳಿ ಇರಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಸಾಕಿದ್ದ ಎಮ್ಮೆಯನ್ನೇ ತಂದು ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ತಹಶಿಲ್ದಾರ್ ಕಾರಿಗೆ ಕಟ್ಟಿದ್ದಾರೆ.


ಆದರೆ ರೈತನ ಆರೋಪವನ್ನು ತಹಶಿಲ್ದಾರ್ ನಿರಾಕರಿಸಿದ್ದಾರೆ. ರೈತನ ಕೆಲಸ ಮಾಡಿಕೊಡಲು ವಿಳಂಬವಾಗಿದ್ದು ಕಂದಾಯ ಇಲಾಖೆಯ ಪಟ್ವಾರಿಯಿಂದಾಗಿ ಎಂದು ಅವರ ಮೇಲೆ ಆಪಾದನೆ ಮಾಡಿದ್ದಾರೆ. ಭೂ ಹಂಚಿಕೆ ಮಾಡಿಕೊಡಲು 3 ತಿಂಗಳು ಹಿಡಿಯುತ್ತದೆ. ಪಟ್ವಾರಿಯಿಂದಾಗಿ ಈ ರೈತನ ಕೇಸಿನಲ್ಲಿ ವಿಳಂಬವಾಗಿದೆ ಎನ್ನುತ್ತಾರೆ ತಹಶಿಲ್ದಾರ್ ಶಿಂಗ್ಲಾ.


ಇನ್ನು ಈ ವಿಷಯ ಮುಖ್ಯಮಂತ್ರಿ ಕಮಲ್ ನಾಥ್ ಗಮನಕ್ಕೆ ಬಂದಿದ್ದು ವಿದಿಶಾ ಜಿಲ್ಲಾಧಿಕಾರಿ ಕೂಡಲೇ ವಿಷಯವನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.


ಈ ಮಧ್ಯೆ ಸಿದ್ದಾಂತ್ ಸಿಂಗ್ ಸಿಂಗ್ಲಾರನ್ನು ತಹಶಿಲ್ದಾರ್ ಹುದ್ದೆಯಿಂದ ವಜಾಗೊಳಿಸಲಾಗಿದ್ದು ಪಟ್ವಾರಿ ಸುನಿಲ್ ಯಾದವ್ ನನ್ನು ಅಮಾನತು ಮಾಡಲಾಗಿದೆ.


ಮಧ್ಯ ಪ್ರದೇಶದಲ್ಲಿ ಈ ರೀತಿ ಘಟನೆಯಾಗುತ್ತಿರುವುದು ಇದೇ ಮೊದಲ ಸಲವಲ್ಲ. ಈ ಹಿಂದೆ ಕಳೆದ ಫೆಬ್ರವರಿಯಲ್ಲಿ ಕೂಡ ಮಧ್ಯ ಪ್ರದೇಶದ ಟಿಕಮ್ ಗರ್ ಜಿಲ್ಲೆಯ ಖಾರಾಗ್ ಪುರ ತಹಸಿಲ್ದಾರ್ ಕಚೇರಿಯಲ್ಲಿ ಮತ್ತೊಬ್ಬ ರೈತ ಹೀಗೆ ಅಧಿಕಾರಿ ಲಂಚ ಕೇಳುತ್ತಿದ್ದಾರೆ ಎಂದು ಎಮ್ಮೆ ತಂದು ಕಟ್ಟಿ ಹಾಕಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.